ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಮೂರನೇ ವರ್ಷದ ರಾಜ್ಯ ಮಟ್ಟದ ಕೊಡವ ಕುಟುಂಬ ಕಪ್-ತೆಂಗೆ ಬೊಡಿ ನಮ್ಮೆ ತೆಂಗಿನ ಕಾಯಿಗೆ ಗುಂಡು ಒಡೆಯುವ ಸ್ಪರ್ಧೆಯನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಉದ್ಘಾಟಿಸಿದರು.  
ಜಿಲ್ಲೆ

ಕೊಡವರ ಹಕ್ಕು ಕಸಿಯಲು ಯತ್ನ

ನಾಪೋಕ್ಲು: ಕೋವಿ ಆಯುಧ ಮಾತ್ರವಲ್ಲ. ಇದು ಕೊಡವ ಜನಾಂಗದ ಧಾರ್ಮಿಕ ಸಂಸ್ಕಾರ. ಇದನ್ನು ಅನಾದಿ ಕಾಲದಿಂದಲೂ ಬಳಕೆ ಮಾಡುತ್ತಾ ಬರುತ್ತಿದ್ದು, ಕೊಡವರ ಈ ಹಕ್ಕು ಸಂವಿಧಾನ ಬದ್ಧವಾಗಿ ದೊರಕಬೇಕಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.

ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನೆಲಜಿ ಫಾರ್ಮರ್ಸ್ ಡೆವಲಪ್‌ಮೆಂಟ್ ಆ್ಯಂಡ್ ರಿಕ್ರಿಯೆಷನ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಮೂರನೇ ವರ್ಷದ ರಾಜ್ಯ ಮಟ್ಟದ ಕೊಡವ ಕೌಟುಂಬಿಕ ಕಪ್-ತೆಂಗೆ ಬೊಡಿ ನಮ್ಮೆ ತೆಂಗಿನ ಕಾಯಿಗೆ ಗುಂಡು ಒಡೆಯುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಯುದ್ಧ ಮತ್ತು ಬೇಟೆ ಕೊಡವರ ಪರಂಪರೆ. ಈ ಹಕ್ಕನ್ನು ಕಸಿಯುವ ಕೆಲಸ ಆಗುತ್ತಿದೆ. ಕೊಡವರ ಸಂಸ್ಕೃತಿ ವಿಶಿಷ್ಟವಾದುದು. ಎಲ್ಲ ಜನಾಂಗದವರ ಧರ್ಮವನ್ನು ಸಮಾನವಾಗಿ ಕಾಣಬೇಕಿದೆ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರಬಾರದು. ಆದರೆ ಇಂದು ಕೊಡವ ಜನಾಂಗದ ಹಕ್ಕನ್ನು ಕಸಿಯುವ ಕೆಲಸ ಆಗುತ್ತಿದೆ. ಕೊಡವ ಜನಾಂಗ ಅನಾದಿ ಕಾಲದಿಂದ ಬಳಕೆ ಮಾಡಿಕೊಂಡು ಬಂದ ಭೂಮಿ ಮತ್ತು ಕೋವಿ ಇಲ್ಲದಂತೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಕೊಡವರ ಆಚರಣೆಗಳಾದ ಕೈಲ್ ಮುಹೂರ್ತ , ಹುತ್ತರಿ, ಕೋವಿಯ ಬಳಕೆ ಮುಂತಾದ ಸಂಸ್ಕೃತಿಯ ಭಾಗಗಳನ್ನು ಸಾರ್ವತ್ರಿಕವಾಗಿ ಪ್ರದರ್ಶಿಸುವ ಕೆಲಸವನ್ನು ಸಿಎನ್‌ಸಿ ಮಾಡುತ್ತಿದೆ. ಕೋವಿಹಬ್ಬವನ್ನು ಕಳೆದ 13 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಕೊಡವರ ದೇವನೆಲೆ, ಭಾಷೆ ,ಸಂಸ್ಕೃತಿಗೆ ಧಕ್ಕೆ ತರುವಂತಹ ಕೆಲಸ ಆಗಬಾರದು ಎಂದರು.
ಕಾಫಿ ಬೆಳೆಗಾರ, ದಾನಿ ಬೊಳ್ಳಚೆಟ್ಟಿರ ಸುರೇಶ್ ಮಾತನಾಡಿ, ಸಂಸ್ಕೃತಿಯನ್ನು ಯುವಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ. ಜನಾಂಗದ ಧಾರ್ಮಿಕ ಸಂಸ್ಕಾರವನ್ನು ಉಳಿಸಿ ಬೆಳೆಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೆಲಜಿ ಫಾರ್ಮರ್ಸ್ ಡೆವಲಪ್‌ಮೆಂಟ್ ಆ್ಯಂಡ್ ರಿಕ್ರಿಯೇಷನ್ ಅಧ್ಯಕ್ಷ ಮಂಡೀರ ನಂದ ನಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಸಿ.ಎಸ್.ಸುರೇಶ್, ಉಪಾಧ್ಯಕ್ಷ ಕೈಬುಲಿರ ಉಮೇಶ್, ಕಾರ್ಯದರ್ಶಿ ಮಾಳೆಯಿಂದ ಪ್ರದೀಪ್, ನಿರ್ದೇಶಕರಾದ ಚೀಯಕಪುಂಡ ನವೀನ್ ನಾಚಪ್ಪ, ಮಾಳೆಯಂಡ ವಿಜಯ, ಮಾಳೆಯಂಡ ವಿಜು, ಚೀಯಕಪುಂಡ ಅಪ್ಪಚ್ಚು, ಅಪ್ಪುಮಣಿಯಂಡ ಕಿಶನ್ ಮೇದಪ್ಪ, ಮಣವಟ್ಟಿರ ಅರುಣ್ ಪಳಂಗಪ್ಪ, ಮಾಳೆಯಂಡ ವಿಜು ಬೊಡಿ ನಮ್ಮೆ ಸಂಚಾಲಕ ಮಾಳೆಯಂಡ ಅಪ್ಪಣ್ಣ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ 128 ಕುಟುಂಬಗಳು ಭಾಗವಹಿಸಿದ್ದವು. ನಾಳೆ ಅಂತಿಮ ಸ್ಪರ್ಧೆ ಜರುಗಲಿದೆ.