ಶ್ರೀಮಂಗಲ: ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಕೊಡವ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆಯಾದ ‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ’ದ ಸದಸ್ಯರು ಅಭಿನಂದಿಸಿದರು.
ಕೊಡವ ಜನಾಂಗದ ಕೊರವುಕಾರರಿಗೆ ನೀಡುವ ವಿಶೇಷ ಗೌರವದ ಪ್ರತೀಕವಾಗಿರುವ ರೇಷ್ಮೆ ಪಟ್ಟ್ ವಸ್ತ್ರವನ್ನು ಪೊನ್ನಣ ಅವರ ಹೆಗಲಿಗಿರಿಸಿ, ಪೊನ್ನಣ್ಣ ಅವರ ಭಾವಚಿತ್ರವನ್ನೊಳಗೊಂಡ ಕೊಡವ ಜನಾಂಗದ ಗುರು ಕಾರೋಣ, ಕುಲಮಾತೆ ಕಾವೇರಿ, ಮಾಗುರು ಇಗ್ಗುತಪ್ಪ ದೇವರ ಆಶೀರ್ವಚನ ನೀಡುವ ವಿಶೇಷ ಫಲಕ ನೀಡಿ ಗೌರವಿಸಲಾಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ ಮಾಡುವಾಗ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದದ ವಿಶೇಷ ಅರಿವು ಇರುವ ಹಾಗೂ ಆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮರ್ಥರನ್ನೇ ಆಯ್ಕೆ ಮಾಡುವಂತೆ ಮನವಿ ಮಾಡಲಾಯಿತು.
ಕೊಡವ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ ಕೆಲವೇ ತಿಂಗಳಲ್ಲಿ ಭಾಷಾವಾರು ಅಕಾಡೆಮಿ ಮಾತ್ರ ಸಾಕು, ಪ್ರತ್ಯೇಕ ಕೊಡವ ಅಕಾಡೆಮಿ ಬೇಡವೆಂದು ಆಗ ಇದ್ದ ಸರ್ಕಾರ ಕೊಡವ ಅಕಾಡೆಮಿಯನ್ನು ಹಿಂಪಡೆಯುವ ಆದೇಶ ಹೊರಡಿಸಿದ್ದ ಸಂದರ್ಭ ‘ಕೊಡವ ತಕ್ಕ್ ಎಳ್ತ್’ಕಾರಡ ಕೂಟ’ವು ಈ ಆದೇಶವನ್ನು ಪ್ರಬಲವಾಗಿ ವಿರೋಧಿಸಿ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜಾನಪದದ ಉಳಿವು ಹಾಗೂ ಬೆಳವಣಿಗೆಗೆ ಅತ್ಯವಶ್ಯಕವೆಂದು ಕೊಡವ ಅಕಾಡೆಮಿ ಉಳಿಸಿಕೊಂಡಿತು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ ಸಾಹಿತ್ಯ ಸಂಸ್ಕೃತಿಯ ಜ್ಞಾನವಿಲ್ಲದ ಆ ಕ್ಷೇತ್ರದಲ್ಲಿ ಸಾಧನೆ ಮಾಡದ ಕೇವಲ ರಾಜಕೀಯ ಪ್ರೇರಿತ ವ್ಯಕ್ತಿಗಳನ್ನೇ ಆಯ್ಕೆ ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ತಮ್ಮ ಅವಧಿಯಿಂದ ಈ ಅವ್ಯವಸ್ಥೆ ಕೊನೆಗಾಣಲಿ ಎಂದು ವಸ್ತುಸ್ಥಿತಿ ಮನವರಿಕೆ ಮಾಡಿಕೊಡುವುದರೊಂದಿಗೆ ಅರ್ಹರನ್ನು ಆಯ್ಕೆ ಮಾಡುವಂತೆ ಕೂಟದ ಸದಸ್ಯರು ಮನವಿ ಮಾಡಿದರು.
ಕೊಡವ ತಕ್ಕ್ ಎಳ್ತ್‘ಕಾರಡ ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಉಪಾಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ, ನಿರ್ದೇಶಕರಾದ ಕಾಳಿಮಾಡ ಮೋಟಯ್ಯ ಸೇರಿದಂತೆ ಮತ್ತಿತರರು ಇದ್ದರು.