ಜಿಲ್ಲೆ

ಕೊಡವ ಲೆದರ್‌ಬಾಲ್ ಕ್ರಿಕೆಟ್‌ಗೆ ಚಾಲನೆ

ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಏ.೧ ರಿಂದ ಏ.೧೩ ರವರೆಗೆ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-೨ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಪಾಲಿಬೆಟ್ಟದ ಟಾಟಾ ಕಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಟಾಟಾ ಕಾಫಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಎ.ಮಂದಣ್ಣ, ಕೂರ್ಗ್ ಎಜುಕೇಶನ್ ಫಂಡ್‌ನ ಅಧ್ಯಕ್ಷ ಸಿ.ಎ.ಮುತ್ತಣ್ಣ, ಟಾಟಾ ಕಾಫಿ ಲಿಮಿಟೆಡ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ಕೆ.ಜಿ.ರಾಜೀವ್, ಕೂರ್ಗ್ ಕ್ರಿಕೆಟ್ ಫೌಂಡೇಶನ್‌ನ ಅಧ್ಯಕ್ಷ ಪೊರುಕೊಂಡ ಸುನಿಲ್, ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ, ಪಂದ್ಯಾವಳಿಯ ಸಂಚಾಲಕ ಚಂಡೀರ ರಚನ್ ಚಿಣ್ಣಪ್ಪ, ಮತ್ತಿತರರು ಉಪಸ್ಥಿತರಿದ್ದರು.

ಕೂರ್ಗ್ ಕ್ರಿಕೆಟ್ ಫೌಂಡೇಶನ್‌ನ ಅಧ್ಯಕ್ಷ ಪೊರುಕೊಂಡ ಸುನಿಲ್ ಮಾತನಾಡಿ, ಈ ಬಾರಿ ೧೦ ಪ್ರಾಂಚೈಸಿ ತಂಡಗಳ ೧೭೫ಕ್ಕೂ ಅಧಿಕ ಕ್ರೀಡಾಪಟುಗಳು ಆಟವಾಡುತ್ತಿದ್ದು, ೧೩ ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ಪ್ರತಿದಿನ ಎರಡು ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕೊಡಗು, ಮೈಸೂರು, ಮಂಗಳೂರು, ಚೆನ್ನೈ, ಪಾಂಡಿಚೇರಿ ಸೇರಿದಂತೆ ಉತ್ತರ ಭಾರತದ ಪ್ರತಿಷ್ಠಿತ ಆಟಗಾರರು ಕೂಡ ಪಾಲ್ಗೊಳ್ಳುತ್ತಿದ್ದಾರೆ. ಸೀಸನ್-೨ರ ವಿಜೇತರಿಗೆ ಪ್ರಥಮ ಬಹುಮಾನ ೨ ಲಕ್ಷ, ದ್ವಿತೀಯ ೧ ಲಕ್ಷ, ತೃತೀಯ ೫೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ. ಕೊಡಗಿನ ಕ್ರೀಡಾ ಪ್ರತಿಭೆಗಳು ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ. ಈ ಕಾರಣಕ್ಕಾಗಿಯೇ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು.

ಮೊದಲ ದಿನದ ಪಂದ್ಯಾವಳಿಯಲ್ಲಿ ವೆಸ್ಟರ್ನ್ ಘಾಟ್ ವಾರಿಯರ್ಸ್ ಮತ್ತು ಕೂರ್ಗ್ ಬ್ಲಾಸ್ಟರ್ಸ್ ತಂಡಗಳು ಗೆಲುವು ದಾಖಲಿಸಿದರೆ, ೨ನೇ ದಿನದ ಪಂದ್ಯಾವಳಿಯಲ್ಲಿ ಪ್ರಗತಿ ಕ್ರಿಕೆಟರ್ಸ್ ಮತ್ತು ಎಂಟಿಟಿ ರಾಯಲ್ಸ್ ಗೆಲುವು ಸಾಧಿಸಿತು.