ಜಿಲ್ಲೆ

ಕೊಡವ ಪಠ್ಯಪುಸ್ತಕ ಹೊರತಂದಿರುವುದರಿಂದ ಭಾಷೆ ಬೆಳವಣಿಗೆ

ಶ್ರೀಮಂಗಲ: ಕೊಡವ ಭಾಷೆಯನ್ನು ಬೆಳೆಸುವ, ಕಲಿಸುವ ಉದ್ದೇಶದಿಂದ ಎರಡರಿಂದ ಐದನೇ ತರಗತಿವರೆಗೆ ಪಠ್ಯಪುಸ್ತಕ ಹೊರತಂದಿದ್ದು, ಇದು ಕೊಡವ ಭಾಷೆ ಬೆಳವಣಿಗೆಗೆ ಅತ್ಯಂತ ದೊಡ್ಡ ಪ್ರಯತ್ನ ಎಂದು ಕೊಡವ ಜಾನಪದ ತಜ್ಞ ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಡ ಮೋಟಯ್ಯ ಅಭಿಪ್ರಾಯಪಟ್ಟರು.


ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೊಡವ ಪಠ್ಯಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಬಿಡುಗಡೆ ಮಾಡಿದರೆ ಸಾಲದು, ಇದು ಶಾಲೆಯ ಪಠ್ಯಕ್ರಮದಲ್ಲಿ ಮುಂದುವರಿಯಬೇಕು. ಮಾತೃಭಾಷೆಯನ್ನು ಬೆಳೆಸಲು ಅಕಾಡೆಮಿ ಮತ್ತು ಕೆಲವು ಶಾಲೆಗಳು ಸ್ವಯಂ ಪ್ರೇರಿತರಾಗಿ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿವೆ. ಇದು ಸಣ್ಣ ವಯಸ್ಸಿನಲ್ಲಿ ಕೊಡವ ಭಾಷೆಯನ್ನು ಮಾತನಾಡಲು ಹಾಗೂ ಬರೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.


ಕಳೆದ ವರ್ಷ ಒಂದನೇ ತರಗತಿಗೆ ಪಠ್ಯಪುಸ್ತಕ ಬಿಡುಗಡೆ ಮಾಡಿ ಕೆಲವು ಶಾಲೆಗಳು ಅದನ್ನು ಒಂದನೇ ತರಗತಿಯಲ್ಲಿ ಅಳವಡಿಸಿಕೊಂಡಿವೆ, ಮುಂದಿನ ಸಾಲಿನ ಶಿಕ್ಷಕರ ವೇತನವನ್ನು ಭರಿಸಲು ಮುಂದಾಗುವ ಮೂಲಕ ಕೊಡವ ಭಾಷೆ ಉಳಿಸಿ, ಬೆಳೆಸಲು ಉತ್ತೇಜನ ನೀಡಬೇಕು ಎಂದು ಹೇಳಿದರು.


ಪಠ್ಯಪುಸ್ತಕ ಸಮಿತಿ ಸದಸ್ಯ ಮುಲ್ಲೇಗಡ ಮಧೋಶ್ ಪೂವಯ್ಯ ಮಾತನಾಡಿ, ಬಿಡುಗಡೆಯಾದ ಪುಸ್ತಕದ ವಿವರಣೆಯನ್ನು ನೀಡಿ ಅಕಾಡೆಮಿ ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಕ್ಷೇತ್ರ, ಸಂಶೋಧನಾ ಗ್ರಂಥಗಳಿಗೆ ವಿಶೇಷ ಒತ್ತು ನೀಡಿರುವುದು ಶ್ಲಾಘನೀಯ.

ಮಕ್ಕಳು ಚಿಕ್ಕ ವಯಸಿನಲ್ಲಿ ಕೊಡವ ಭಾಷೆಯನ್ನು ಕಲಿಯಲು ಪಠ್ಯಪುಸ್ತಕ ಹೊರತಂದು ಉತ್ತಮವಾದ ಕೆಲಸ ಮಾಡಿದೆ. ಕಪ್ಪು ಬಿಳುಪಿನ ಬದಲು ರಂಗಿನಲ್ಲಿ ಪಠ್ಯಪುಸ್ತಕವನ್ನು ಹೊರತಂದಿರುವುದು ಆಕರ್ಷಣೀಯವಾಗಿದೆ. ಸಣ್ಣ ಮಕ್ಕಳು ಕಲಿಯುವಂತಹ ಸಣ್ಣ ಸಣ್ಣ ಪದ್ಯ, ವ್ಯಾಕರಣ, ಚಿತ್ರಸಹಿತ ವಿವರಣೆ, ಶಬ್ದಕೋಶ ಪದಬಂಧ ಸಣ್ಣ ಸಣ್ಣ ಪಾಠಗಳು ಮತ್ತು ಕಥೆಗಳು ಪಠ್ಯಪುಸ್ತಕದ ಮೆರಗನ್ನ ಹೆಚ್ಚಿಸಿದೆ, ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕೊಡವ ಭಾಷೆಯನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಭವಿಷ್ಯದಲ್ಲಿ ಕೊಡವ ಭಾಷೆಯ ಅಭಿವೃದ್ಧಿಗೆ ಅವಕಾಶವಾಗಲಿದೆ ಎಂದು ಹೇಳಿದರು.


ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ ಮಾತನಾಡಿ, ಕೊಡವ ಭಾಷೆಯ ಅಭಿವೃದ್ಧಿಗೆ ಪ್ರಸ್ತುತ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಚರಿತ್ರಾರ್ಹ ಕೆಲಸ ಮಾಡಿದೆ. ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಭಾಷೆ ಸಾಹಿತ್ಯ ಸಂಸ್ಕೃತಿ, ಪದ್ಧತಿ, ಪರಂಪರೆ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.


ಕೊಡವ ಪಠ್ಯ ಕ್ರಮ ಅನುಷ್ಠಾನ ಮತ್ತು ಬೋಧನಾ ಸಮಿತಿ ಸಂಚಾಲಕ ಮಾಚಿಮಾಡ ಎಂ.ರವೀಂದ್ರ ಮಾತನಾಡಿ ಅಲ್ಪಸಂಖ್ಯಾತ ಕೊಡವ ಭಾಷೆಯನ್ನು ಪಠ್ಯಕ್ರಮದಲ್ಲಿ ಕಲಿಯುವ ಮೂಲಕ ವಿದ್ಯಾರ್ಥಿಗಳು ಭಾಷೆಯನ್ನು ಉಳಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಉದ್ದೇಶ-ಗುರಿ ಸರಿ ಇದ್ದರೆ ಪ್ರತಿಫಲ ಕಾಣುತ್ತೇವೆ. ಕಳೆದ 15 ವರ್ಷಗಳ ಹಿಂದೆಯೇ ಕೊಡವ ಪಠ್ಯಪುಸ್ತಕ ತಯಾರಾಗಿದ್ದು, ಅನುಷ್ಠಾನಗೊಳ್ಳಲು ವಿಳಂಬವಾಗಿತ್ತು. ಈ ಯೋಜನೆಗೆ ಮರು ಪ್ರಯತ್ನ ಮಾಡಿ ಪಠ್ಯಕ್ರಮ ಅನುಷ್ಠಾನ ಫಲಪ್ರದವಾಗಿದೆ. ಈಗಾಗಲೇ ಐದು ಪ್ರಾಥಮಿಕ ಶಾಲೆಗಳಲ್ಲಿ ಕೊಡವ ಭಾಷೆಯನ್ನು ಒಂದು ವಿಷಯವಾಗಿ ಬೋಧಿಸಲಾಗುತ್ತಿದೆ. ಪ್ರಸ್ತುತ 5ನೇ ತರಗತಿವರೆಗಿನ ಪಠ್ಯ ಪುಸ್ತಕವನ್ನು ಹೊರತರಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಮಕ್ಕಳ ಪಾಲಕರು ಹಾಗೂ ದಾನಿಗಳ ಒಂದು ಸಭೆಯನ್ನು ಕರೆದು ಕೊಡವ ಭಾಷೆಯ ಪಠ್ಯಕ್ರಮ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಮಾಲೋಚನೆಯನ್ನು ನಡೆಸಲಾಗುವುದು ಎಂದು ಹೇಳಿದರು.


ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ಕೊಡವ ಭಾಷೆಯನ್ನು ಒಂದು ಭಾಷೆಯಾಗಿ ಒಂದರಿಂದ ಐದನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಕಲಿಸಲು ಅವಕಾಶವಿದೆ. ಆದರೆ ಆರನೇ ತರಗತಿಯಿಂದ ಕೊಡವ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಸಲು ಮತ್ತು ಪಠ್ಯಪುಸ್ತಕ ಹೊರ ತರಲು ಸರಕಾರದ ಆದೇಶದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯ ವತಿಯಿಂದ ಸರಕಾರದ ಮಟ್ಟದಲ್ಲಿ ಬಹಳಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಎಲ್ಲ ಕೊಡವ ಸಮಾಜ, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಹೇಳಿದರು.


ಕೊಡವ ಭಾಷೆ ಬೆಳೆಯಲು ನಾವು ಪ್ರತಿನಿತ್ಯ ಓದುವ ಬರೆಯುವ ಮತ್ತು ಮಾತನಾಡುವ ಭಾಷೆಯಾಗಿ ರೂಪುಗೊಳ್ಳಬೇಕು. ಒಂದರಿಂದ ಐದನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಸ್ವ-ಇಚ್ಛೆಯಿಂದ ಕಲಿಯಲು ಅವಕಾಶವಿದೆ ಆದರೆ ಇದು ಕಡ್ಡಾಯವಲ್ಲ. ನಮ್ಮ ಅವಧಿಯಲ್ಲಿ ಸಾಹಿತಿಗಳ ಪುಸ್ತಕ, ಶಬ್ದಕೋಶ, ವ್ಯಾಕರಣ, ಪಠ್ಯಪುಸ್ತಕ ಸೇರಿ 20 ಪುಸ್ತಕ ಹೊರತರಲಾಗಿದೆ ಎಂದು ವಿವರಿಸಿದರು.


ಪಠ್ಯಪುಸ್ತಕ ಸಮಿತಿಯ ಸದಸ್ಯರಾದ ಪಡಿಞರಂಡ ಪ್ರಭುಕುಮಾರ್,
ಅಕಾಡೆಮಿ ಸದಸ್ಯರಾದ ಮಾಚಿಮಾಡ ಜಾನಕಿ, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ, ಪಠ್ಯಪುಸ್ತಕ ಸಮಿತಿ ಸದಸ್ಯ ಧರ್ಮಶೀಲ ಅಜಿತ್, ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕರಾದ ಮೂಕಳಮಾಡ ಅರಸುನಂಜಪ್ಪ, ಕೊಣಿಯಂಡ ಸಂಜುಸೋಮಯ್ಯ, ಮೂಕಳೇರ ಕಾವ್ಯ, ಮಧುಕುಮಾರ್ ಉಪಸ್ಥಿತರಿದ್ದರು.