ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ತೋಟದ ಮನೆಯೊಂದರಲ್ಲಿ ಜಗ್ಗಪ್ಪ ಗಡ್ಡದ ಎನ್ನುವ ವೃದ್ಧ ಬೆನ್ನು ನೋವಿನ ನಿವಾರಣೆಗಾಗಿ ಬಂದಿದ್ದ ವ್ಯಕ್ತಿಯನ್ನು ಮಲಗಿಸಿ ಭಂಡಾರ ಹಾಕಿ ಕೊಡಲಿಯಿಂದ ಹೊಡೆದು ಚಿಕಿತ್ಸೆ ನೀಡುತ್ತಿರುವುದು. 
ಜಿಲ್ಲೆ

ಕೊಡಲಿ ಹೊಡೆತಕ್ಕೆ ಕಾಯಿಲೆ ವಾಸಿಯಂತೆ !

ಬಾಗಲಕೋಟೆ: ಹಲವು ವರ್ಷಗಳ ಹಿಂದೆ ಇಡೀ ದೇಶದ್ಯಂತ ಗಮನ ಸೆಳೆದಿದ್ದ ಬಾಗಲಕೋಟೆಯ ಬ್ಲೇಡ್ ಬಾಬಾ ಪ್ರಕರಣ ಇನ್ನು ನೆನಪು ಆರಿಲ್ಲ. ಸರ್ವರೋಗಗಳಿಗೂ ಬ್ಲೇಡ್ ನಿಂದ ಕೊಯ್ದು ಚಿಕಿತ್ಸೆ ನೀಡಿ ವಾಸಿ ಮಾಡುತ್ತೇನೆ ಎನ್ನುತ್ತಿದ್ದ ಬ್ಲೇಡ್ ಬಾಬಾ, ವೈದ್ಯರ ನೀಡಿದ ಸವಾಲ್ ಎದುರಿಸಲಾಗದೇ ಕಾಲ್ಕಿತ್ತಿದ್ದ.

ಇದೀಗ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಹೀಗೆಯೇ ವಿವಿಧ ಕಾಯಿಲೆಗಳಿಗೆ ಆತ ನೀಡುವ ಚಿಕಿತ್ಸೆ ನೋಡಿದರೆ ಎಂತವರಾದರೂ ಬೆಚ್ಚಿಬೀಳುತ್ತಾರೆ. ಹೌದು, ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಜಕ್ಕಪ್ಪ ಗಡ್ಡದ(೬೦) ಎನ್ನುವ ವೃದ್ಧ ವಿವಿಧ ಕಾಯಿಲೆಗಳಿಗೆ ಕೊಡಲಿಯಿಂದ ಹೊಡೆಯುತ್ತಾನೆ(ಕಟ್ಟಿಗೆ ಕಡಿಯುವಂತೆ ಕೊಚ್ಚುತ್ತಾನೆ). ಈ ವಿಡಿಯೋ ನೋಡಿದರೆ ಒಂದು ಕ್ಷಣ ಎಲ್ಲರೂ ಹೌಹಾರಿ ಬೀಳುವಂತಿದೆ.
ಕೈ ನೋವು, ಮೈ ನೋವು, ಮಂಡೆ ನೋವು, ಬೆನ್ನು ನೋವು ಹೀಗೆ ವಿವಿಧ ನೋವು ಎಂದು ಬರುವ ಜನರನ್ನು ಮಲಗಿಸಿ ಅವರ ಮೇಳೆ ಭಂಡಾರ ಹಾಕಿ ಬಳಿಕ ಕೊಡಲಿಯಿಂದ ಹೊಡೆಯುತ್ತಾನೆ. ಇದರಿಂದ ಕಾಯಿಲೆ ವಾಸಿ ಆಗುತ್ತದೆ ಎಂದು ನಂಬಿಸಿದ್ದು, ದುಡ್ಡಿಗಾಗಿ ಜನರನ್ನು ಯಾಮಾರಿಸುವ ದಂಧೆ ನಡೆಸುತ್ತಿದ್ದಾನೆ.

ಹೀಗೆ ಭಯಾನಕವಾಗಿ ನೀಡುವ ಕೊಡಲಿ ಹೊಡೆತದ ದೃಶ್ಯದ ತುಣಕುಗಳು ವೈರಲ್ ಆಗಿದ್ದು, ಇದೀಗ ಪೊಲೀಸರು ಅದಕ್ಕೆ ಕಡಿವಾಣ ಹಾಕಿದ್ದರೆ. ೧೨ ವರ್ಷಗಳಿಂದ ಈ ಕೃತ್ಯ ನಡೆಸುತ್ತ ಬಂದಿದ್ದಾನೆ ಎನ್ನಲಾದ ಜಕ್ಕಪ್ಪ ಗಡ್ಡದ ವಿರುದ್ಧ ಮೂಢನಂಬಿಕೆ ನಿಷೇಧ ಕಾಯ್ದೆ ಅಡಿಯಲ್ಲಿ ಮುಧೋಳ ತಾಲೂಕಿನ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೆಯೇ ವಿಚಾರಣೆಗೆ ಹಾಜರಾಗುವಂತೆ ಜಕ್ಕಪ್ಪನಿಗೆ ನೋಟಿಸ್ ನೀಡಲಾಗಿದೆ. ಮೂಢನಂಬಿಕೆ ನಿಷೇಧ ಕಾಯ್ದೆ ಅಡಿಯಲ್ಲಿ ದಾಖಲಾಗುವ ಪ್ರಕರಣಕ್ಕೆ ಒಂದರಿಂದ ೭ ವರ್ಷ ಶಿಕ್ಷೆ ಇರುವುದರಿಂದ ಮೊದಲು ಆತನಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗುವುದು. ವಿಚಾರಣೆಗೆ ಸ್ಪಂದಿಸದಿದ್ದಲ್ಲಿ ಬಂಽಸಲಾಗುತ್ತದೆ ಎಂದು ಎಸ್ಪಿ ಅಮರನಾಥ್ ರೆಡ್ಡಿ ಹೇಳುತ್ತಾರೆ.

ಭಾನುವಾರಕ್ಕೊಮ್ಮೆ ತೋಟದ ಮನೆಯಲ್ಲಿ :
ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಕಾಶಿಲಿಂಗ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಪೂಜಾರಿ ಆಗಿದ್ದಾನೆ ಈ ಜಕ್ಕಪ್ಪ ಗಡ್ಡದ. ೬೦ ವಯಸ್ಸಿನ ಈ ವ್ಯಕ್ತಿ. ಪ್ರತಿ ಭಾನುವಾರ ಬೇರೆ ಕಡೆಗೆ ಇರುವ ತೋಟದ ಮನೆಯೊಂದರಲ್ಲಿ ವಿವಿಧ ಕಾಯಿಲೆಗಳಿಗೆ ಈ ರೀತಿ ಅವೈಜ್ಞಾನಿಕ ರೀತಿಯ ಚಿಕಿತ್ಸೆ ಕೊಡುತ್ತಾನೆ. ತೋಟದ ಮನೆಗೆ ಚಿಕಿತ್ಸೆಗೆಂದು ಬರುವ ಜನರನ್ನು ಮಲಗಿಸಿ, ಆತನ ಬೆನ್ನಿಗೆ ಭಂಡಾರ ಹಾಕಿ ಬಳಿಕ ಕೊಡಲಿ ಮೇಲೆತ್ತಿ ಬೆನ್ನಿಗೆ ಹೊಡೆಯುತ್ತಾನೆ. ಬಳಿಕ ಮತ್ತಷ್ಟು ಭಂಡಾರವನ್ನು ಕೊಡಲಿಯಿಂದ ಹೊಡೆದ ಜಾಗಕ್ಕೆ ಹಾಕುತ್ತಾನೆ. ಕೊಡಲಿ ಎತ್ತಿ ಹೊಡೆಯುವುದನ್ನು ನೋಡಿದರೆ ಮಲಗಿರುವ ವ್ಯಕ್ತಿ ತುಂಡಾಗಿ ಹೋಗಬೇಕು. ಆದರೆ, ಯಾವುದೇ ಗಾಯ ಆಗಲ್ಲವಂತೆ. ಇದು ಪವಾಡ ಎಂದು ನಂಬುವ ಜನರ ಮುಗ್ದತೆಯನ್ನು ದುರುಪಯೋಗ ಪಡಿಸಿಕೊಂಡು ಈ ಕೃತ್ಯ ನಡೆಸುತ್ತಿದ್ದಾನೆ.

ಎಸ್ಪಿ ಅಮರನಾಥ ರೆಡ್ಡಿ ಪ್ರಕ್ರಿಯೆ ನೀಡಿ, ಮೆಟಗುಡ್ಡ ಗ್ರಾಮದಲ್ಲಿ ಜಕ್ಕಪ್ಪ ಗಡ್ಡದ ಎನ್ನುವ ವ್ಯಕ್ತಿ ಹೀಗೆ ಮುಗ್ದ ಜನರನ್ನು ನಂಬಿಸಿ ಕಾಯಿಲೆ ವಾಸಿ ಮಾಡಲು ಕೊಡಲಿಯಿಂದ ಹೊಡೆಯುತ್ತಾನೆ ಎನ್ನುವ ವಿಡಿಯೋ ಗಮನಿಸಿ ಅದನ್ನು ಬಂದ್ ಮಾಡಿಸಲಾಗಿದೆ. ಅತನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದು, ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಈ ರೀತಿ ಜನರನ್ನು ನಂಬಿಸಿ ಮೋಸಗೊಳಿಸುವ ಈ ರೀತಿ ಚಿಕಿತ್ಸೆ ಮತ್ತ್ಯಾರಾದರೂ ಕೊಡುತ್ತಿರುವುದು ಜನರ ಗಮನಕ್ಕೆ ಇದ್ದರೆ ತಕ್ಷಣವೇ ಠಾಣೆಗೆ ಮಾಹಿತಿ ನೀಡಿ. ಇದೆಲ್ಲವೂ ಸುಳ್ಳು. ಜನರು ಇಂತವುಕ್ಕೆಲ್ಲ ಮಾರುಹೋಗಬಾರದು ಎಂದು ಮನವಿ ಮಾಡಿದ್ದಾರೆ.