ಕುಶಾಲನಗರ:
ಕೂಡಿಗೆಯ ಕೊಡಗು ಸೈನಿಕ ಶಾಲೆಯಲ್ಲಿ ಶನಿವಾರ ಶಾಲೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟ(ಕೊಡ್ಯಾಕ್)ದ ಸಮಾಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯಲ್ಲಿನ ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ನಡುವಿನ ಅರ್ಥಪೂರ್ಣ ಬಾಂಧವ್ಯವನ್ನು ಬೆಸೆಯುವ ಹಾಗೂ ಸಹೋದರತ್ವ ಭಾವನೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತು. ಈ ಕಾರ್ಯಕ್ರಮದಲ್ಲಿ ಸುಮಾರು 115ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ ಮಹೇಶ್ ಹಂಚಿನಮನಿ ಹಳೇ ವಿದ್ಯಾರ್ಥಿಗಳ ಸಂಘದ ದೃಷ್ಟಿಕೋನ, ಮೌಲ್ಯಗಳು ಮತ್ತು ಪ್ರಸ್ತುತ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಮಾಜಮುಖಿ ಚಟುವಟಿಕೆಗಳ ಕುರಿತು ಸ್ಫೂರ್ತಿದಾಯಕವಾದ ಮಾತುಗಳನ್ನಾಡುತ್ತಾ ಪ್ರಾತ್ಯಕ್ಷಿಕೆಯನ್ನು ನೀಡಿದರು. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮೊಹಮ್ಮದ್ ಶಫಿವುಲ್ಲಾ ಮಾತನಾಡಿ ಶಾಲೆಯ ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳ ಸಂಘದ ಬದ್ಧತೆಯನ್ನು ಕುರಿತು ತಿಳಿಸಿದರು. ಇದೇ ಸಂದರ್ಭದಲ್ಲಿ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ಸ್ಥಾನ ಗಳಿಸಿದ ಮೆನನ್ ನಿಲಯಕ್ಕೆ ಪ್ರಶಸ್ತಿ ಪತ್ರ ಹಗೂ ಪಾರಿತೋಷಕವನ್ನು ವಿತರಿಸಲಾಯಿತು. ಹಾಗೆಯೇ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸರ್ವ ಕ್ಷೇತ್ರಗಳಲ್ಲಿಯೂ ಗಣನೀಯ ಸಾಧನೆಗೈದ ಕಾರ್ಯಪ್ಪ ನಿಲಯಕ್ಕೆ ಅತ್ಯುತ್ತಮ ನಿಲಯ (ಕಾಕ್ ಹೌಸ್) ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ ಶಾಲೆಯ ಇತ್ತೀಚಿನ ಶೈಕ್ಷಣಿಕ ಸಾಧನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗಳ ಕುರಿತು ಹಳೇ ವಿದ್ಯಾರ್ಥಿಗಳ ಸಂಘಕ್ಕೆ ತಿಳಿಸಿಕೊಟ್ಟರು. ಕೊಡಗು ಸೈನಿಕ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಹಸ ಪ್ರಜ್ಞೆ ಹಾಗೂ ನೈತಿಕ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿರುತ್ತಾರೆ. ಈ ಶಾಲೆಯಲ್ಲಿ ಕಳೆಯುವ ಪ್ರತಿ ಕ್ಷಣವೂ ಅವರಲ್ಲಿ ಸ್ಥೈರ್ಯ ಹಾಗೂ ಸಹನಶೀಲತೆಯ ಗುಣವನ್ನು ಬೆಳೆಸುತ್ತದೆ, ಈ ಗುಣಗಳೇ ಅವರಿಗೆ ಭಾವಿ ಬದುಕಿಗೆ ಆದರ್ಶಪ್ರಾಯವಾದ ವ್ಯಕ್ತಿತ್ವವನ್ನು ರೂಪಿಸುತ್ತವೆ. ಹಳೆಯ ವಿದ್ಯಾರ್ಥಿಗಳು ಬಿಟ್ಟುಹೋಗಿರುವ ಪರಂಪರೆ ಹಾಗೂ ಸಹೋದರತ್ವ ಭಾವನೆ ಇಂದಿನ ವಿದ್ಯಾರ್ಥಿಗಳ ಬದುಕಿಗೆ ಇಂದಿಗೂ ಪ್ರೇರಣೆಯಾಗಿ ಉಳಿದಿದೆ ಎಂದರು.
ಶಾಲೆಯ 12ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ನಡುವೆ ಸ್ನೇಹಪೂರ್ವಕವಾಗಿ ಪುಟ್ಬಾಲ್ ಪಂದ್ಯ ಹಾಗೂ ಹಾಕಿ ಪಂದ್ಯವನ್ನೂ ಏರ್ಪಡಿಸಲಾಗಿತ್ತು. ಪುಟ್ಬಾಲ್ ಪಂದ್ಯದಲ್ಲಿ ಶಾಲೆಯ ವಿದ್ಯಾರ್ಥಿಗಳು 4-2 ಗೋಲುಗಳಿಂದ ವಿಜೇತರಾದರೆ, ಹಾಕಿ ಪಂದ್ಯಾವಳಿಯಲ್ಲಿ ಹಳೇ ವಿದ್ಯಾರ್ಥಿಗಳ ತಂಡವು 2-1 ಗೋಲುಗಳಿಂದ ವಿಜೇತರಾದರು.
ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ , ಉಪಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲಾ ವೈದ್ಯಾಧಿಕಾರಿ ಡಾ. ಚಿನ್ಮಯಿ, ಹಿರಿಯ ಶಿಕ್ಷಕ ಎನ್. ವಿಬಿನ್ ಕುಮಾರ್, ಶಾಲೆಯ ಮಾಜಿ ಶಿಕ್ಷಕ ಆರೋಕ್ಯ ರಾಜ್, ಎಸ್. ಸೂರ್ಯನಾರಾಯಣ ಮತ್ತಿತರರು ಇದ್ದರು.