ಸಿದ್ದಾಪುರ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮಿನಿ ಒಲಿಂಪಿಕ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಂಡರ್ 14 ಬಾಲಕರ ತಂಡ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸಿ ಹಾಸನ ತಂಡದ ವಿರುದ್ಧ 1-0 ಗೋಲುಗಳ ಅಂತರದಿಂದ ಪರಾಭವಗೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ರಾಜ್ಯ ಒಲಿಂಪಿಕ್ ಸಂಸ್ಥೆ, ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟು ಕೊಡಗು ತಂಡವು ಹೊಸ ಇತಿಹಾಸ ಸೃಷ್ಟಿಸಿತ್ತು.
ನವೆಂಬರ್ 16ರಿಂದ 18ರವರೆಗೆ ಬೆಂಗಳೂರಿನ ರಾಜ್ಯ ಫುಟ್ಬಾಲ್ ಸಂಸ್ಥೆಯ ಮೈದಾನದಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಬಾಲಕರ ತಂಡವು ಮೊದಲ ಪಂದ್ಯವನ್ನು 3-1 ಗೋಲುಗಳ ಅಂತರದಿಂದ ಮೈಸೂರು ತಂಡವನ್ನು ಮಣಿಸಿತು.
ದ್ವಿತೀಯ ಪಂದ್ಯವನ್ನು ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿತು. ಮೂರನೇ ಪಂದ್ಯದಲ್ಲಿ ದಾವಣಗೆರೆ ಜಿಲ್ಲಾ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿ ಬಾಲಕರ ಎ ಗುಂಪಿನಲ್ಲಿ ಪ್ರಥಮ ಸ್ಥಾನಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ನಾಗೇಶ್(ಈಶ್ವರ್) ಮತ್ತಿತರರಿದ್ದರು.
ಕೊಡಗು ತಂಡದ ತರಬೇತುದಾರರಾಗಿ ಮಡಿಕೇರಿಯ ಕ್ರಿಸ್ಟೋಫರ್ ಕಾರ್ಯನಿರ್ವಹಿಸಿದರು.