ಜಿಲ್ಲೆ

ಕೊಡಗು ಜಿಲ್ಲೆಯ ಗರ್ವಾಲೆಯಲ್ಲಿ ಅಪರೂಪದ ಜೇಡ ಪತ್ತೆ

ಹಾಸನ: ಹಾಸನದ ಪರಿಸರ ಮಾರ್ಗದರ್ಶಿ ದಿವ್ಯಶ್ರೀ ಅವರ ತಂಡವು ಕೈಗೊಂಡಿದ್ದ ಅಧ್ಯಯನದ ವೇಳೆ ಕೊಡಗು ಜಿಲ್ಲೆಯ ಗರ್ವಾಲೆ ಎಂಬಲ್ಲಿ ಹೊಸ ಪ್ರಭೇದದ ಅಪರೂಪದ ಜೇಡವೊಂದು ಪತ್ತೆಯಾಗಿದೆ.
129 ವರ್ಷಗಳ ಬಳಿಕ ಪ್ರತ್ಯಕ್ಷವಾದ ಒಂದೇ ತಳಿಯ ಎರಡನೇ ಪ್ರಭೇದ ಇದಾಗಿದೆ. ಸಾಮಾನ್ಯವಾಗಿ ಈ ತರಹದ ಜೇಡಗಳು ಚೀನಾ, ಸಿಂಗಾಪುರ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಭಾರತದಲ್ಲಿ ಈ ಪ್ರಭೇದದ ಜೇಡ ಕಂಡುಬಂದಿರುವುದು ಇದೇ ಮೊದಲು ಎನ್ನಲಾಗಿದೆ. ಪರಿಸರ ಮಾರ್ಗದರ್ಶಿಗಳಾದ ಹಾಸನದ ದಿವ್ಯಶ್ರೀ, ಡಾ.ಅಭಿಜಿತ್, ಲೋಹಿತ್‌ಕುಮಾರ್, ಡಾ. ಜಾನ್‌ಟಿ.ಬಿ.ಕಾಲೆಬ್ ಅವರು ಜೇಡದ ಬಗ್ಗೆ ವಿಶೇಷ ಅಧ್ಯಯನ ಕೈಗೊಂಡಿದ್ದು, ಜೂಟಾಕ್ಸಾ ರಿಸರ್ಚ್ ಜರ್ನಲ್‌ನಲ್ಲಿ ಈ ಮಾಹಿತಿ ಪ್ರಕಟವಾಗಿದೆ. 2023ರ ಮಾರ್ಚ್ 13ರಂದು ಕೊಡಗು ಜಿಲ್ಲೆಯ ಗರ್ವಾಲೆ ಎಂಬಲ್ಲಿ ಪತ್ತೆಯಾದ ಜೇಡವನ್ನು ಪ್ರಯೋಗಾಲಕ್ಕೆ ಕಳುಹಿಸಿಕೊಡಲಾಗಿತ್ತು. ಇದು 129 ವರ್ಷಗಳ ಬಳಿಕ ಪತ್ತೆಯಾದ ವಿಶೇಷ ಜೇಡವೆಂಬುದು ದೃಢಪಟ್ಟಿದೆ.
ಇದು ಎಲ್ಲಾ ಜೇಡಗಳಂತೆ ಸಾಮಾನ್ಯವಾಗಿರುವುದಿಲ್ಲ. ನೋಡಲು ಚೇಳುಗಳನ್ನೇ ಹೋಲುವಂತಿದ್ದು, ಬಹಳ ಸೂಕ್ಷ್ಮ ಕೀಟವಾಗಿದೆ. ಗರ್ವಾಲೆಯಲ್ಲಿ ಸಿಕ್ಕಿರುವ ಕಾರಣಕ್ಕೆ ಅದಕ್ಕೆ ಲಿಡ್ಜಸ್ ಗರ್ವಾಲೆ ಎಂದು ಹೆಸರಿಡಲಾಗಿದೆ.