ವಿರಾಜಪೇಟೆ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಮಂಗಳವಾರ ಗೌಡ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಇತ್ತೀಚೆಗೆ ನೀಡಿದ ಭರವಸೆಯಂತೆ ಶಾಸಕರು 1 ಕೋಟಿ ರೂ.ಅನುದಾನದ ಭರವಸೆ ನೀಡಿರುವುದಕ್ಕೆ ಸಮಾಜದವರು ಧನ್ಯವಾದ ಅರ್ಪಿಸಿದರು.
ಅರೆಭಾಷೆ ಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣ ಮಾತನಾಡಿ, ಈ ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಗೌಡ ಸಮಾಜಕ್ಕೆ 75 ಲಕ್ಷ ರೂ.ನೀಡಿದ್ದರು. ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಅರೆಭಾಷೆಯ ಗೌಡ ಜನಾಂಗಕ್ಕೆ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರದ ಸ್ಥಾಪನೆಗಾಗಿ ಮದೆನಾಡು ಗ್ರಾಮದ ಸರ್ವೇ ನಂಬರ್ 98/1 ರ ಪೈಸಾರಿ ಜಾಗದಲ್ಲಿ ಖಾಲಿ ಇರುವ 13 ಎಕರೆ ಜಾಗವನ್ನುಮಂಜೂರು ಮಾಡಲು ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಮಾಜದ ಪ್ರಮುಖರ ಈ ಬೇಡಿಕೆಯನ್ನು ಸಚಿವ ಸಂಪುಟದ ಮುಂದಿಟ್ಟು ಮುಂದಿನ ದಿನಗಳಲ್ಲಿ ಮಂಜೂರು ಮಾಡುವ ಭರವಸೆ ನೀಡಿದರು.
ಶಾಸಕರಿಗೆ, ಸಮಾಜದ ಇನ್ನಿತರ ಹಲವು ಪ್ರಮುಖ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕರು, ಮನವಿಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗೌಡ ಸಮಾಜದ ಪ್ರಮುಖರಾದ ಸೋಮಣ್ಣ, ಗಿರೀಶ್, ಬಿ.ಎಸ್.ಆನಂದ್, ರಾಜೇಂದ್ರ, ಅನಂತ್ ಕುಮಾರ್, ವಸಂತ, ಸಂದೀಪ್, ಸೀತಾರಾಮ್, ದಮಯಂತಿ ಮತ್ತಿತರ ಮುಖಂಡರು ಹಾಜರಿದ್ದರು.