ಶ್ರೀಮಂಗಲ: ಉದ್ಯೋಗ ನಿಮಿತ್ತ ವಲಸೆ ಹೋಗುತ್ತಿರುವ ಜನಾಂಗದ ಯುವಕರಿಗೆ ಕೊಡಗಿನಲ್ಲಿಯೇ ಅವಕಾಶ ಸೃಷ್ಟಿಸಿ ಬದುಕು ಕಲ್ಪಿಸಿಕೊಡುವ ಅಗತ್ಯತೆ ಇದೆ ಎಂದು ಅಖಿಲ ಕೊಡವ ಸಮಾಜದ ನೂತನ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಭಿಪ್ರಾಯಪಟ್ಟರು.
ಬಾಡಗರಕೇರಿಯಲ್ಲಿ ಮರೆನಾಡ್ ಕೊಡವ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಮರೆನಾಡ್ ಪುತ್ತರಿ ನಾಡ್ ಕೋಲ್ ಮಂದ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವಿಷಯ ಕುರಿತು ಡಿ.20 ರಂದು ಅಖಿಲ ಕೊಡವ ಸಮಾಜದ ವಿರಾಜಪೇಟೆ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಕೊಡವ ಜನಾಂಗದ ಯುವಕರಿಗೆ ಕೊಡಗಿನಲ್ಲಿಯೇ ಉದ್ಯೋಗ ಸೃಷ್ಟಿಸುವ ಜತೆಗೆ ಹೊರಗೆ ನೆಲೆಸಿರುವ ಯುವ ಪೀಳಿಗೆಯನ್ನು ಜಿಲ್ಲೆಯತ್ತ ಆಕರ್ಷಿಸಲು ಇರುವ ಅವಕಾಶದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
1942ರಲ್ಲಿ ಸ್ಥಾಪನೆಯಾದ ಅಖಿಲ ಕೊಡವ ಸಮಾಜದ ಸ್ಥಾಪಕಾಧ್ಯಕ್ಷರು ಪರದಂಡ ಕುಟುಂಬದವರಾಗಿದ್ದರು. ಇದೀಗ ಮತ್ತೆ ನಮ್ಮ ಕುಟುಂಬಕ್ಕೆ ಈ ಸ್ಥಾನ ದೊರೆತಿದ್ದು ಅಖಿಲ ಕೊಡವ ಸಮಾಜದ ಗತವೈಭವವನ್ನು ಮರುಕಳಿಸಲು ಎಲ್ಲರ ಸಹಕಾರ ಪಡೆದು ಪ್ರಯತ್ನಿಸಲಾಗುವುದು. ಮರೆನಾಡು ಕೊಡವ ಸಮಾಜದಲ್ಲಿ ಪುತ್ತರಿ ಕೋಲ್ ಮಂದ್ ಸಾಂಸ್ಕೃತಿಕ ವೈಭವದ ಆಚರಣೆ ನೋಡಿ ಹೆಮ್ಮೆಯಾಗಿದೆ. ಕೊಡವ ಸಂಸ್ಕೃತಿ ಪಾಲನೆಯಾಗಬೇಕು. ಜನಾಂಗದಲ್ಲಿ ಭೂಮಿ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಆದ್ದರಿಂದ ಕೊಡವರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿಯೂ ಅಖಿಲ ಕೊಡವ ಸಮಾಜ ಚಿಂತನೆ ನಡೆಸಲಿದೆ ಎಂದು ಹೇಳಿದರು.
ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ ಮಾತನಾಡಿ, ಗಡಿ ಪ್ರದೇಶದಲ್ಲಿರುವ ಮರೆನಾಡ್ ಕೊಡವ ಸಮಾಜದ ಅಭಿವೃದ್ಧಿಗೆ ಜನಾಂಗದ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ನಾಡ್ ತಕ್ಕ ಕುಟುಂಬವಾದ ಕಾಯಪಂಡ, ಚಂಗಣಮಾಡ, ಬೊಳ್ಳೇರ ಕುಟುಂಬದ ತಕ್ಕ ಮುಖ್ಯಸ್ಥರು ಸಾಂಪ್ರದಾಯಿಕ ಮಂದ್ ಪುಡಿಪ ಮೂಲಕ ಮಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಲ್ಲೇಂಗಡ ಧನಂಜಯ, ಗುಡ್ಡಮಾಡ ಚಂಗಪ್ಪ, ಕರ್ತಮಾಡ ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು.
ಮರೆನಾಡ್ ಕೊಡವ ಸಮಾಜ ಗೌರವ ಅಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಗೌರವ ಕಾರ್ಯದರ್ಶಿ ಅಯ್ಯಮಾಡ ಮುತ್ತಣ್ಣ, ಉಪಾಧ್ಯಕ್ಷರಾದ ಕರ್ತಮಾಡ ಮಿಲನ್ ಮೇದಪ್ಪ, ಕುಪ್ಪಣಮಾಡ ಬೇಬಿ ಚೋಂದಮ್ಮ, ಸಲಹೆಗಾರ ಕಾಳಿಮಾಡ ಮುತ್ತಣ್ಣ, ಸದಸ್ಯರಾದ ಕಾಯಪಂಡ ಚಿಣ್ಣಪ್ಪ, ಅಣ್ಣಳಮಾಡ ಲಾಲ ಅಪ್ಪಣ್ಣ, ಕಾಯಪಂಡ ರಾಮು ಪೆಮ್ಮಯ್ಯ, ಚೋನಿರ ಮಧು ಕಾರ್ಯಪ್ಪ, ಕುಪ್ಪಣಮಾಡ ಪೆಮ್ಮಯ್ಯ, ಕಾಳಿಮಾಡ ಸೋಮಣ್ಣ, ಮೀದೇರಿರ ಕವಿತಾ, ಬೊಟ್ಟಂಗಡ ರವೀಂದ್ರ, ಮೀದೇರಿರ ರಾಜ, ಮೂಕಳಮಾಡ ವೀಟು, ಅಣ್ಣಳಮಾಡ ಗಿರೀಶ್, ಬಿರುನಾಣಿ ಗ್ರಾಪಂ ಅಧ್ಯಕ್ಷೆ ಮಲ್ಲೇಂಗಡ ರೀನಾ ಹಾಜರಿದ್ದರು.