ಜಿಲ್ಲೆ

ಕೊಡಗಿನ ಶಾಸಕರು ಯಾರಾಗುತ್ತಾರೆ?

ಮಡಿಕೇರಿ:

ಕೊಡಗಿನಲ್ಲಿ ಮುಂದಿನ ಶಾಸಕರು ಯಾರು ? ಮತದಾನ ಮುಗಿದ ನಂತರ ಬುಧವಾರ ಸಂಜೆಯಿಂದ ಜಿಲ್ಲೆಯಾದ್ಯಂತ ಸದ್ದು ಮಾಡುತ್ತಿರುವ ಪ್ರಶ್ನೆಯಿದು. ಎರಡು ಕ್ಷೇತ್ರಗಳಲ್ಲೂ ಜೆಡಿಎಸ್ ಮೌನಕ್ಕೆ ಜಾರಿದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಗೆಲುವು ತಮ್ಮದೇ ಎಂದು ಬೀಗುತ್ತಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷವನ್ನು ಸಂಭ್ರಮಿಸುವಂತೆ ಮಾಡಿದೆ. ಅಭ್ಯರ್ಥಿಗಳ ಭವಿಷ್ಯ ಸದ್ಯಕ್ಕೆ ಸ್ಟ್ರಾಂಗ್ ರೂಮ್‌ನಲ್ಲಿ ಭದ್ರವಾಗಿದ್ದು, ಶನಿವಾರ (ಮೇ ೧೩) ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.

ಒಂದು ವಾರದಿಂದ ಈಚೆಗೆ ಜಿಲ್ಲೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು, ಮತದಾನದ ಮುನ್ನಾ ದಿನ ರಾತ್ರಿಯ ಚಟುವಟಿಕೆಗಳು ಜಿಲ್ಲೆಯ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ ಎನ್ನುವ ಮಾತುಗಳು ರಾಜಕೀಯ ಆಸಕ್ತರ ಮಧ್ಯೆ ಕೇಳಿಬರುತ್ತಿದೆ. ಚುನಾವಣಾ ಪೂರ್ವ ಲೆಕ್ಕಾಚಾರಗಳೆಲ್ಲಾ ಬುಡಮೇಲಾಗಿ ಅಚ್ಚರಿ ಅನ್ನಿಸುವ ಫಲಿತಾಂಶ ಜಿಲ್ಲೆಯಲ್ಲಿ ಹೊರಹೊಮ್ಮಲಿದೆ ಎನ್ನುವುದು ಹಲವು ವರ್ಷಗಳಿಂದ ಜಿಲ್ಲೆಯ ರಾಜಕೀಯವನ್ನು ಹತ್ತಿರದಿಂದ ನೋಡುತ್ತಿರುವವರ ಮಾತು. ಮಡಿಕೇರಿ ಕ್ಷೇತ್ರದಲ್ಲಿ ಕೊನೆಯ ಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಶಸ್ತ್ರ ತ್ಯಾಗ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷವೊಂದರ ಸ್ಟಾರ್ ಪ್ರಚಾರಕ ಅನ್ನಿಸಿಕೊಂಡವರ ಲಂಗು ಲಗಾಮು ಇಲ್ಲದ ಮಾತುಗಳು ಕೊಡಗಿನ ರಾಜಕೀಯ ಬದಲಾವಣೆಯಲ್ಲಿ ಈ ಬಾರಿ ಪರಿಣಾಮಕಾರಿ ಪಾತ್ರವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊಡಗಿನಲ್ಲಿ ಮತದಾನೋತ್ತರ ಸಮೀಕ್ಷೆಗಳಿಗೆ ಕೂಡ ಸರಿಯಾದ ಅಂತ್ಯ ಸಿಗದಂತೆ ಆಗಿದೆ. ಕಾಂಗ್ರೆಸ್ ಪಾಳೆಯ ವಿರಾಜಪೇಟೆ ಕ್ಷೇತ್ರದ ಗೆಲುವಿನ ಬಗ್ಗೆ ಹಿಂದಿನಿಂದಲೂ ಹೆಚ್ಚು ಆತ್ಮವಿಶ್ವಾಸ ಹೊಂದಿತ್ತು. ಮತದಾನ ಮುಗಿದ ನಂತರ ’ವಿರಾಜಪೇಟೆಯಲ್ಲಿ ಗೆಲುವು ನಮಗೆ ಖಚಿತ,’ ಎಂದು ಮುಖಂಡರು ಮತಗಟ್ಟೆವಾರು ಅಂಕಿ ಅಂಶ ಮುಂದಿಡುತ್ತಿದ್ದಾರೆ. ಬಿಜೆಪಿಯವರು ಮೇಲ್ನೋಟಕ್ಕೆ ತಾವು ಸುಭದ್ರವಾಗಿರುವುದಾಗಿ ತೋರಿಸಿಕೊಳ್ಳುತ್ತಿದ್ದರೂ, ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ ಎನ್ನುವುರ ಬಗ್ಗೆ ಪಕ್ಷದೊಳಗೆ ಆಂತರಿಕವಾಗಿ ಚರ್ಚೆ ನಡೆಯುತ್ತಿದೆ.

ಮಾಜಿ ಸಚಿವ ಬಿ.ಎ. ಜೀವಿಜಯ ಪಕ್ಷಕ್ಕೆ ರಾಜೀನಾಮೆ ಮತ್ತು ಜೆಡಿಎಸ್ ಅಬ್ಬರದ ಪ್ರಚಾರ ನಡೆಸುತ್ತಿದ್ದಂತೆಯೇ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಉತ್ಸಾಹ ಇಮ್ಮಡಿಸಿತ್ತು. ಕಾಂಗ್ರೆಸ್ ಸ್ವಲ್ಪ ಮಂಕಾದಂತೆ ಕಂಡುಬಂದರೂ ಪ್ರಚಾರ ವೈಖರಿ ಬದಲಿಸಿಕೊಂಡು ಮುನ್ನುಗ್ಗುವ ಮೂಲಕ ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವುದರೊಂದಿಗೆ ರಣಕಣವನ್ನು ಮತ್ತಷ್ಟು ವರ್ಣರಂಜಿತಗೊಳಿಸಿತ್ತು. ಮತದಾನದ ಮುನ್ನಾದಿನ ಜೆಡಿಎಸ್ ಅಭ್ಯರ್ಥಿ ಏಕಾಏಕಿ ’ನಾಟ್ ರೀಚೆಬಲ್’ ಆಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳೆಯ ಮತ್ತಷ್ಟು ಚುರುಕಾಯಿತು. ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ನಡೆಸಿರುವ ಪ್ರಯತ್ನ ಫಲ ಕೊಡುವ ನಿರೀಕ್ಷೆಯಲ್ಲಿರುವ ಕಾಂಗ್ರೆಸಿಗರು ಇಲ್ಲೂ ತಮ್ಮ ಅಭ್ಯರ್ಥಿ ಗೆಲುವು ಖಚಿತ ಎನ್ನುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ಶುರು ಮಾಡಿದ್ದಾರೆ.

ಬಿಜೆಪಿಯವರು ಬೇರೆಯದ್ದೇ ಲೆಕ್ಕಾಚಾರದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ತಟಸ್ಥವಾಗಿದ್ದರಿಂದ ತಮ್ಮ ಪಕ್ಷದ ಮೇಲೆ ದೊಡ್ಡ ಪರಿಣಾಮ ಬೀರಲಿಕ್ಕಿಲ್ಲ ಎನ್ನುವ ನಿರೀಕ್ಷೆ ಇವರದ್ದು. ಜೆಡಿಎಸ್‌ನಲ್ಲಿ ಇದ್ದಿದ್ದು ಜೀವಿಜಯ ಮತಗಳು. ಅವರು ಹೇಗಿದ್ದರೂ ಆ ಪಕ್ಷ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದರು. ಈಗ ಕಾಂಗ್ರೆಸ್‌ನಲ್ಲೂ ಇಲ್ಲ. ಇದಲ್ಲದೆ ಪಕ್ಷದ ಸಾಂಪ್ರದಾಯಿಕ ಮತ ಬ್ಯಾಂಕ್ ಗಟ್ಟಿಯಾಗಿದ್ದು, ಕಾರ್ಯರ್ತರ ಮಟ್ಟದ ಸಮೀಕ್ಷೆಗಳು ಧನಾತ್ಮಕವಾಗಿಯೇ ಇರುವುದರಿಂದ ಮಡಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಶತಸ್ಸಿದ್ಧ ಎನ್ನುತ್ತಿದ್ದಾರೆ.

ಅಭ್ಯರ್ಥಿಗಳ ಸೋಲು ಮತ್ತು ಗೆಲುವಿನಲ್ಲಿ ಒಟ್ಟಾರೆ ಚಲಾವಣೆ ಆಗಿರುವ ಮತದ ಪ್ರಮಾಣವೂ ಪ್ರಮುಖ ಪಾತ್ರ ವಹಿಸಲಿದೆ. ಮತದಾನದ ಶೇಕಡವಾರು ಪ್ರಮಾಣ ಏರಿಕೆ ಕಂಡಷ್ಟೂ ತಮಗೆ ಲಾಭ ಎನ್ನುವುದು ಬಿಜೆಪಿಗರ ಅಭಿಪ್ರಾಯ. ಕೊಡಗಿನಲ್ಲಿ ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಶೇ. ೭೫.೩೯, ವಿರಾಜಪೇಟೆ ಕ್ಷೇತ್ರದಲ್ಲಿ ಶೇ. ೭೪.೦೭ ಸೇರಿದಂತೆ ಒಟ್ಟು ಶೇ. ೭೪.೭೪ರಷ್ಟು ಮತದಾನವಾಗಿದೆ. ಇದು ಯಾರಿಗೆ ಅನುಕೂಲ ಎನ್ನುವುದನ್ನು ನೋಡಲು ಶನಿವಾರ (ಮೇ೧೩) ತನಕ ಕಾಯಬೇಕು.

ಎರಡು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಗೆಲುವಿನ ಲೆಕ್ಕಾಚಾರ ನಡೆಸುವುದರಲ್ಲಿ ಮುಳುಗಿದ್ದರೆ, ಈಗಾಗಲೇ ಅಭ್ಯರ್ಥಿಗಳ ಹಣೇಬರಹ ಬರೆದಿರುವ ಮತದಾರ ಮತ ಎಣಿಕೆ ದಿನ ನಿರೀಕ್ಷೆಯಲ್ಲಿ ಇದ್ದಾನೆ. ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳ ಒಟ್ಟು ೫೪೩ ಮತಗಟ್ಟೆಗಳ ಮತ ಯಂತ್ರಗಳನ್ನು ಮಡಿಕೇರಿಯ ಮತ ಎಣಿಕೆ ಕೇಂದ್ರಕ್ಕೆ ತರಲಾಗಿದ್ದು, ಸ್ಟ್ರಾಂಗ್ ರೂಮನಲ್ಲಿ ಭದ್ರವಾಗಿ ಇಡಲಾಗಿದೆ. ಯೋಧರು ಮತ್ತು ಪೊಲೀಸರನ್ನು ಮತಯಂತ್ರಗಳ ಕಾವಲಿಗೆ ನಿಲ್ಲಿಸಲಾಗಿದೆ.    

ಶನಿವಾರ(ಮೇ ೧೩) ಬೆಳಗ್ಗೆ ೮ ಗಂಟೆಯಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಎರಡೂ ವಿಧಾನಸಭಾ ಕ್ಷೇತ್ರದ ಎಣಿಕೆ ಕಾರ್ಯ ಮಡಿಕೇರಿ ಸಂತ ಜೊಸೇಫರ ಕಾನ್ವೆಂಟ್‌ನಲ್ಲಿ ಬೇರೆ ಬೇರೆ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ. ಎಣಿಕೆ ಕೇಂದ್ರದಲ್ಲಿ ೧೪-ಇವಿಯಂ ಎಣಿಕೆ ಟೇಬಲ್, ೩-ಇಟಿಪಿಬಿಎಸ್ ಎಣಿಕೆ ಟೇಬಲ್ ಮತ್ತು ೪-ಅಂಚೆ ಮತಪತ್ರಗಳ ಎಣಿಕೆ ಟೇಬಲ್ ಗಳನ್ನು ಅಳವಡಿಸಲಾಗಿದೆ. ಎಣಿಕೆ ಕಾರ್ಯವನ್ನು ವೆಬ್‌ಕಾಸ್ಟಿಂಗ್ ಮಾಡಲಾಗುತ್ತದೆ.

ಈ ಸಲ ಜಿಲ್ಲೆಯ ಮಟ್ಟಿಗೆ ಫಲಿತಾಂಶ ಹೇಳುವುದಾದರೆ ಅದು ಗೊತ್ತಿರುವ, ಅಂದಾಜು ಮಾಡಬಲ್ಲ, ಏಕೈಕ ’ಸೆಫಾಲಜಿಸ್ಟ್’ ಅಂದರೆ ಅದು ದೇವರು ಮಾತ್ರ. ತಲೆಗೆ, ಪೆನ್ನು ಪೇಪರ್ ಲೆಕ್ಕಾಚಾರಕ್ಕೆ ವಿಶ್ರಾಂತಿ ನೀಡಿ ತಣ್ಣಗೆ ಕುಳಿತು ಕೊಳ್ಳುವುದೇ ಇರುವ ಏಕೈಕ ಮಾರ್ಗ.
ಭಾರದ್ವಾಜ ಕೆ. ಆನಂದತೀರ್ಥ, ರಾಜಕೀಯ ವಿಶ್ಲೇಷಕ