ಜಿಲ್ಲೆ

ಕೊಟ್ಟ ಮಾತು ಮರೆತ ಜನಪ್ರತಿನಿಧಿಗಳು: ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಅಸಮಾಧಾನ

ತುಮಕೂರು: ಚುನಾವಣೆ ಪೂರ್ವದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗ್ಗೆ ಭರವಸೆ ನೀಡುವ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಗೆದ್ದ ನಂತರ ಎಲ್ಲವನ್ನೂ ಮರೆಯುತ್ತಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್​ ಅಭಿಪ್ರಾಯಪಟ್ಟರು.

ನಗರದ ಯಾದವ ಹಾಸ್ಟೆಲ್​ನಲ್ಲಿ ಮಂಗಳವಾರ ಮಾಜಿ ಸಿಎಂ ಡಿ.ದೇವರಾಜ ಅರಸು ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದವರ ಬೆಂಬಲದಿಂದ ಶಾಸಕರಾದ ಸಾಕಷ್ಟು ಜನರು ಮಾತು ಉಳಿಸಿಕೊಂಡಿಲ್ಲ ಎಂದರು.

ಇತ್ತೀಚೆಗೆ ನಗರದಲ್ಲಿ ಡಿ.ದೇವರಾಜು ಅರಸು ಭವನ ಉದ್ಘಾಟನೆಗೆ ಬಿಸಿಎಂ ಇಲಾಖೆ ಅಧಿಕಾರಿಗಳು ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡರನ್ನು ಆಹ್ವಾನಿಸದೇ ಅವಮಾನಿಸಿದ್ದಾರೆ ಎಂದು ಬೇಸರಿಸಿದರು.

ಡಿ.ದೇವರಾಜ ಅರಸು ಎಂಬುದು ಒಂದು ಹೆಸರಲ್ಲ, ಅದು ಹಿಂದುಳಿದ ವರ್ಗಗಳ ಶಕ್ತಿ. ಶ್ರಮ ಸಂಸತಿಯ ಜಾತಿಗಳನ್ನು ಗುರುತಿಸಿ, ಅವರಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ಅವಕಾಶದ ಭಾಗಿಲುಗಳು ತೆರೆದುಕೊಳ್ಳುವಂತೆ ಮಾಡಿದವರು ಎಂದರು.

ಗೊಲ್ಲರ ಸಂದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಹಿಂದುಳಿದ ವರ್ಗದವರ ನೋವು ಅರ್ಥ ಮಾಡಿಕೊಂಡ ನಾಯಕ ದೇವರಾಜ ಅರಸು. ಅವರನ್ನು ಸ್ಮರಿಸುವ ಮೂಲಕ ಗೌರವ ಸಲ್ಲಿಸಬೇಕಾದ್ದು ನಮ್ಮ ಕರ್ತವ್ಯ ಎಂದರು.

ನಗರದಲ್ಲಿ ಸ್ಮಾರ್ಟ್​ಸಿಟಿ ವತಿಯಿಂದ ನಿರ್ಮಿಸುತ್ತಿರುವ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ಡಿ.ದೇವರಾಜ ಅರಸು ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.

ತಿಗಳ ಸಮಾಜದ ಮುಖಂಡ ಪ್ರೆಸ್​ ರಾಜಣ್ಣ ಮಾತನಾಡಿ, ಭೂ ಮಾಲೀಕರ ಅಡಿಯಾಳಾಗಿ ದುಡಿಯುತಿದ್ದ ಗೇಣಿದಾರರಿಗೆ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ತಂದು, ಭೂಮಿ ಹಕ್ಕು ಪಡೆಯುವಂತೆ ಮಾಡಿದರು ದೇವರಾಜ ಅರಸು ಎಂದರು.

ನಗರದ ಸರ್ಕಾರಿ ಬಸ್​ ನಿಲ್ದಾಣಕ್ಕೆ ದೇವರಾಜ ಅರಸು ಅವರ ಹೆಸರಿಡಲು 2016&17ರಲ್ಲಿ ತುಮಕೂರು ನಗರಸಭೆಯಲ್ಲಿ ರ್ನಿಣಯ ಕೈಗೊಳ್ಳಲಾಗಿದೆ. ಈಗ ಅದನ್ನು ಮತ್ತೆ ಸಭೆಗೆ ಮಂಡಿಸಿ,ಅನುಮೋದನೆ ಪಡೆಯಬೇಕು ಎಂದು ಒತ್ತಾಯಿಸಿದರು.

ಆರ್ಯ ಈಡಿಗರ ಸಂದ ಜಿಲ್ಲಾ ಉಪಾಧ್ಯಕ್ಷ ಶಿವಣ್ಣ, ಕುರುಬ ಸಮಾಜದ ಮುಖಂಡ ಕೆಂಪರಾಜು, ಅನಿಲ್​, ಟಿ.ಎನ್​.ಮಧುಕರ್​ ಮತ್ತಿತರರು ಇದ್ದರು.

1976&77 ರಲ್ಲಿ ಉದ್ಯೋಗದಲ್ಲಿ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದ ವರ್ಗದ ವಿದ್ಯಾವಂತರು ಸರ್ಕಾರಿ ನೌಕರಿ ಪಡೆಯುವಂತೆ ಮಾಡಿದವರು ದೇವರಾಜ ಅರಸು. > ಜಿ.ಎಂ.ಸಣ್ಣಮುದ್ದಯ್ಯ, ನಿವೃತ್ತ ಕಂದಾಯ ಅಧಿಕಾರಿ