ಜಿಲ್ಲೆ

ಕೊಟ್ಟ ಮಾತು ಉಳಿಸಿಕೊಂಡಿದೆ ಸರ್ಕಾರ

ಕೂಡ್ಲಿಗಿ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಜನತೆಗೆ ಸರ್ಕಾರ ಎಲ್ಲ ಗ್ಯಾರಂಟಿಗಳನ್ನು ನೀಡಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿ ಸೋಮವಾರ ಮಾತನಾಡಿದರು. ಮಹಿಳೆಯರು ಶಕ್ತಿ ಯೋಜನೆಗೆ ಬಲ ತುಂಬಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಸಂತೃಪ್ತ ಭಾವನೆ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಬಡವರ ಅಭ್ಯುದಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನಪರ ಆಡಳಿತ ನೀಡಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಅಂದಾಜು ಎರಡು ಸಾವಿರ ಕೋಟಿ ರೂಪಾಯಿಗೂ ಅಧಿಕ ಅನುದಾನ ನೀಡಿ ಕಾಂಗ್ರೆಸ್ ಸರ್ಕಾರ ಬಡವರ ಪರ ಇದೆ ಎಂಬುದನ್ನು ಸಾಬೀತು ಮಾಡಿದೆ ಎಂದು ತಿಳಿಸಿದರು.

ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್ ಶುಕೂರ್, ಪ್ರಮುಖರಾದ ಸಾವಜ್ಜಿ ರಾಜೇಂದ್ರ ಪ್ರಸಾದ್, ಮಾದೆಹಳ್ಳಿ ನಜೀರ್, ಹಡಗಲಿ ವೀರಭದ್ರಪ್ಪ, ಢಾಣಿ ರಾಘವೇಂದ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಜಿಲಾನ್, ಬಾಲಾಜಿ ನಾಯ್ಕ, ಬಣವಿಕಲ್ಲು ಎರಿಸ್ವಾಮಿ, ಸಾರಿಗೆ ವ್ಯವಸ್ಥಾಪಕ ಮಂಜುನಾಥ ಇತರರಿದ್ದರು.