ಜಿಲ್ಲೆ

ಕೊಚ್ಚಿ ಹೋಯ್ತು ಬೆಣ್ಣೆ ಹಳ್ಳ ಸೇತುವೆ, ಬಂಧಿಯಾದ ಜನರು

ನರಗುಂದ: ನಿರಂತರ ಮಳೆ, ಬೆಣ್ಣೆಹಳ್ಳದ ಪ್ರವಾಹಕ್ಕೆ ತಾಲೂಕಿನ ಕುರ್ಲಗೇರಿ- ತಡಹಾಳ ಗ್ರಾಮದ ಮಧ್ಯದ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ನರಗುಂದದಿಂದ ಕುರ್ಲಗೇರಿ ಮಾರ್ಗವಾಗಿ ಗದಗ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯದ ಪ್ರಮುಖ ರಸ್ತೆ ಇದಾಗಿದೆ. ನವಲಗುಂದ ತಾಲೂಕಿನ ತಡಹಾಳ ಹಾಗೂ ಕುರ್ಲಗೇರಿ ಗ್ರಾಮಗಳ ಮಧ್ಯದಲ್ಲಿರುವ ಬೆಣ್ಣೆಹಳ್ಳ ಮತ್ತು ಸಣ್ಣ ಹಳ್ಳಕ್ಕೆ ಸೇತುವೆ ನಿರ್ವಿುಸಲಾಗಿದೆ. 500 ಮೀಟರ್​ಗೂ ಹೆಚ್ಚಿನ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಇದರಿಂದ ನವಲಗುಂದ ತಾಲೂಕಿನ ತಡಹಾಳ, ಕೊಂಗವಾಡ, ನಾಯಕನೂರ, ಅರಹಟ್ಟಿ ಮತ್ತಿತರ ಗ್ರಾಮಗಳಿಂದ ನರಗುಂದಕ್ಕೆ ಶಾಲಾ, ಕಾಲೇಜ್​ಗೆ ಆಗಮಿಸುವ ವಿದ್ಯಾರ್ಥಿಗಳು, ಪ್ರಯಾಣಿಕರು, ರೈತರಿಗೆ ತೊಂದರೆಯಾಗಿದೆ.
ನವಲಗುಂದ ತಾಲೂಕಿನ ಶಲವಡಿ, ಖನ್ನೂರ ಮಧ್ಯದ ರಸ್ತೆ ಪ್ರವಾಹಕ್ಕೆ ಕುಸಿದು ಬಿದ್ದದ್ದರಿಂದ ಈ ಭಾಗದ ಜನರು, ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾಲ್ಕೈದು ದಿನಗಳಿಂದ ಅಲ್ಲಿನ ಜನರು ಬೇರೆಡೆ ತೆರಳಲಾಗದೇ ಮನೆಯಲ್ಲಿಯೇ ಬಂಧಿಯಾಗಿ ಕುಳಿತುಕೊಂಡಿದ್ದಾರೆ.