ರೋಣ: ತಾಲೂಕಿನ ಸವಡಿ ಗ್ರಾಮದಿಂದ ಅಬ್ಬಿಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳ ಹಳ್ಳದ ರಸ್ತೆ ಭಾರಿ ಮಳೆಯಿಂದ ಕೊಚ್ಚಿ ಹೋಗಿದೆ. ಇದರಿಂದ ರೈತರ ಜಮೀನುಗಳಿಗೆ ತೆರಳು ವುದು ಸಮಸ್ಯೆ ಯಾಗಿದೆ. ಕಳೆದ ಅನೇಕ ವರ್ಷಗಳಿಂದ ದುರಸ್ತಿ ಕಾಣದ ಈ ಹಳ್ಳದ ರಸ್ತೆ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ.
ಈ ಹಿಂದೆ ಮಳೆಯಾದರೆ ಹಳ್ಳದ ಮೂಲಕ ನೀರು ಸರಾಗವಾಗಿ ಹರಿದು ಈ ರಸ್ತೆಗೆ ಯಾವುದೇ ಅಡೆತಡೆ ಉಂಟಾಗುತ್ತಿರಲಿಲ್ಲ. ಇತ್ತೀಚೆಗೆ ಈ ರಸ್ತೆ ಬಲ ಭಾಗದಲ್ಲಿ ಅವೈಜ್ಞಾನಿ ಕವಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಿರುವುದರಿಂದ ಸರಾಗವಾಗಿ ಹರಿದು ಹೋಗುತ್ತಿದ್ದ ಮಳೆ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಇದರಿಂದ ರಸ್ತೆ ಹಾಳಾಗಿದೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳಾದ ಚೆನ್ನಯ್ಯಾ ಚರಂತಿಮಠ, ಶರಣಬಸಪ್ಪ ಮಂಗಳೂರ.
ಸವಡಿ ಗ್ರಾಮದ ಬಹುತೇಕ ರೈತರ ಜಮೀನುಗಳಿಗೆ ಈ ರಸ್ತೆಯ ಮೂಲಕವೇ ತೆರಳಬೇಕು. ಹೀಗಾಗಿ, ಬಹಳ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.