ಸಕೊಕ್ಕಬರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡಿರುವುದು. 
ಜಿಲ್ಲೆ

ಕೊಕ್ಕಬರೆ ಅಂಗನವಾಡಿ ಕಾಮಗಾರಿ ಅರೆಬರೆ

ಹನೂರು: ತಾಲೂಕಿನ ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕ್ಕಬರೆ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಅಪೂರ್ಣಗೊಂಡಿದೆ. ಇದರಿಂದ ಮಕ್ಕಳು ಶಾಲಾ ಪೂರ್ವ ಶಿಕ್ಷಣವನ್ನು ಶಿಥಿಲಾವಸ್ಥೆಯ ಕಟ್ಟಡದಲ್ಲಿ ಕಲಿಯಬೇಕಿದ್ದು, ತುಂಬಾ ತೊಂದರೆಪಡುವಂತಾಗಿದೆ.


ಮ.ಬೆಟ್ಟದಿಂದ 8 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ಬೇಡಗಂಪಣ ಸಮುದಾಯದ ಜನರು ಮಾತ್ರ ವಾಸಿಸುತ್ತಿದ್ದಾರೆ. ಇಲ್ಲಿ 82 ಕುಟುಂಬಗಳಿದ್ದು, 270ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮದಲ್ಲಿ ಹಿಂದೆ ಅಂಗನವಾಡಿ ಕೇಂದ್ರ ಇರಲಿಲ್ಲ. ಇದರಿಂದ ಮಕ್ಕಳು ಶಾಲಾ ಪೂರ್ವ ಶಿಕ್ಷಣದಿಂದ ವಂಚಿತರಾಗಿದ್ದರು. ಅಂಗನವಾಡಿ ಕೇಂದ್ರ ತೆರೆಯುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದರು.

ಈ ದಿಸೆಯಲ್ಲಿ ಕಳೆದ 5 ವರ್ಷದ ಹಿಂದೆ ಬಾಡಿಗೆ ಮನೆಯೊಂದರಲ್ಲಿ ಕೇಂದ್ರವನ್ನು ತೆರೆಯಲಾಗಿತ್ತು. ಬಳಿಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದಕ್ಕೆ ಕೇಂದ್ರವನ್ನು ಸ್ಥಳಾಂತರಿಸಲಾಗಿದ್ದು, ಪ್ರಸ್ತುತ 20 ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಕೊಠಡಿಯು ಶಿಥಿಲಾವಸ್ಥೆಯ ಹಂತ ತಲುಪಿದ್ದು, ಮಕ್ಕಳ ಕಲಿಕೆಗೆ ಅನನುಕೂಲವಾಗಿ ಪರಿಣಮಿಸಿದೆ.

ಅಪೂರ್ಣಗೊಂಡ ಕಟ್ಟಡ: ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆಯ ಕೊಠಡಿ ಶಿಥಿಲಗೊಂಡ ಪರಿಣಾಮ ಗ್ರಾಮಸ್ಥರು ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಈ ದಿಸೆಯಲ್ಲಿ 2015-16ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಅಂಗನವಾಡಿ ಕೇಂದ್ರ ಮಂಜೂರಾಗಿದ್ದು, 9 ಲಕ್ಷ ರೂ.ಅನುದಾನದ ಜತೆಗೆ ಜಾಗವನ್ನೂ ನೀಡಲಾಗಿತ್ತು. ಆದರೆ ಎಸ್‌ಆರ್ ದರ ವ್ಯತ್ಯಾಸದ ಪರಿಣಾಮ ಕಾಮಗಾರಿಯನ್ನು ಕೈಗೊಳ್ಳಲಾಗಿರಲಿಲ್ಲ. ಬಳಿಕ 18 ಲಕ್ಷ ರೂ.ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ತಯಾರಿಸಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.

ಇದರ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದ್ದು, ಕಳೆದ ಒಂದು ವರ್ಷದ ಹಿಂದೆಯೇ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ವಿದ್ಯುತ್ ಸಂಪರ್ಕ, ನೆಲೆಹಾಸು (ಟೈಲ್ಸ್ ಅಳವಡಿಕೆ) ಸೇರಿದಂತೆ ಇನ್ನಿತರ ಕೆಲವು ಕಾಮಗಾರಿಗಳು ಬಾಕಿ ಇದೆ. ಆದರೆ ಹಣಕಾಸಿನ ವಿಚಾರವಾಗಿ ಕೇಂದ್ರದ ನಿರ್ಮಾಣ ಕಾರ್ಯ ಅಪೂರ್ಣಗೊಂಡಿದ್ದು, ನನೆಗುದಿಗೆ ಬಿದ್ದಿದೆ. ಇದರಿಂದ ಅಂಗನವಾಡಿ ಕೇಂದ್ರ ಮಂಜೂರಾದರೂ ಪೂರ್ಣಗೊಳ್ಳದ ಪರಿಣಾಮ ಮಕ್ಕಳಿಗೆ ಸ್ವಂತ ಕೇಂದ್ರದ ಕಟ್ಟಡದ ಭಾಗ್ಯ ಇನ್ನು ದಕ್ಕಿಲ್ಲದಂತಾಗಿದೆ.

ಶಿಥಿಲಗೊಂಡ ಕಟ್ಟಡ: ಪ್ರಸ್ತುತ ಇರುವ ಕೇಂದ್ರದ ಕಟ್ಟಡ ತೀವ್ರ ಹಾಳಾಗಿದೆ. ಪರಿಣಾಮ ಮಳೆ ಬಂದ ಸಂದರ್ಭಗಳಲ್ಲಿ ನೀರು ಜಿನುಗುತ್ತಿರುತ್ತದೆ. ಇದರಿಂದ ಕಟ್ಟಡದ ಮೇಲ್ಭಾಗದಲ್ಲಿ ಸಿಮೆಂಟ್ ತುಣುಕುಗಳು ಕಳಚಿ ಬೀಳುತ್ತಿದೆಯಲ್ಲದೆ, ಅಲ್ಲಲ್ಲಿ ಬಿರುಕು ಬಿಟ್ಟಿದೆ. ಮಳೆ ಬಂದ ವೇಳೆ ನೀರು ಸೋರುವುದರಿಂದ ನೆಲವು ವಿಪರೀತ ತೇವಾಂಶದಿಂದ ಕೂಡಿರುತ್ತದೆ. ಹಾಗಾಗಿ ಮಕ್ಕಳ ಕಲಿಕೆಗೆ ತೊಡಕಾಗಿದ್ದು, ಈ ವೇಳೆ ಕೇಂದ್ರದ ಹೊರಾಂಗಣದ ಪಡಸಾಲೆಯಲ್ಲಿ ಮಕ್ಕಳು ಕಾಲ ಕಳೆಯುವಂತಾಗಿದೆ. ಆದ್ದರಿಂದ ಮಕ್ಕಳ ಕಲಿಕೆಗೆ ಈ ಕೇಂದ್ರ ಯೋಗ್ಯವಾಗಿಲ್ಲವಾಗಿದೆ.

ಒತ್ತಾಯ: ಶಿಥಿಲಾವಸ್ಥೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವು ಕಾರ್ಯನಿರ್ವಹಿಸುತ್ತಿರುವುದರಿಂದ ಮಕ್ಕಳ ಪಾಲಕರಲ್ಲಿ ಭೀತಿ ಆವರಿಸಿದೆ. ಇದರಿಂದ ಕೆಲ ಪಾಲಕರು ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಅಪೂರ್ಣಗೊಂಡಿರುವ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.