ಜಿಲ್ಲೆ

ಕೊಕಟನೂರ ದುರ್ಗಾದೇವಿ ಜಾತ್ರೆ ಸಂಭ್ರಮ

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವವು ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಗಳೊಂದಿಗೆ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ದುರ್ಗಾದೇವಿ ಮೂರ್ತಿಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಗ್ರಾಮಸ್ಥರು ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ದೇವಿಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ಸುಮಂಗಲೆಯರು ಕುಂಭಾರತಿ ಹಿಡಿದು ಸಾಗಿದರು. ಶಹನಾಯ ವಾದನ ಹಾಗೂ ಚೌಡಕಿ ಕಲಾವಿದರ ಗಾಯನಗಳು ಮೆರವಣಿಗೆಗೆ ಮೆರುಗು ನೀಡಿದವು. ಗೀಗಿ ಪದ, ಕರಬಲ್ ಕಲಾವಿದರು ಜಾತ್ರೆಯ ಭಕ್ತರನ್ನು ರಂಜಿಸಿದರು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಶಾಲ ದೇಸಾಯಿ, ರಾಜುಗೌಡ ಪಾಟೀಲ, ಶ್ರೀಮಂತ ಮಾದರ, ಶಿವಗೌಡ ಸವದಿ, ಸುರೇಂದ್ರ ಭಜಂತ್ರಿ, ಸುಭಾಷ ಮಾದರ, ಮಲ್ಲಪ್ಪ ನೇಮಗೌಡ, ಪದ್ಮಾ ಮಾದರ, ವಿಠ್ಠಲ ಜಗದಾಳೆ ಇತರರಿದ್ದರು.