ಪಂಚನಹಳ್ಳಿ (ಕಡೂರು ತಾ.): ಪರಿಸರ ಸಂರಕ್ಷಣೆಗಾಗಿ ಪ್ರತಿ ವರ್ಷ ಜೂನ್ ಮತ್ತು ಜುಲೈನಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಸರ್ಕಾರಿ ಜಾಗದಲ್ಲಿ ಗಿಡಗಳನ್ನು ನೆಡುತ್ತಾರೆ. ರಸ್ತೆಯ ಇಕ್ಕೆಲಗಳಲ್ಲೂ ಗಿಡಗಳನ್ನು ಬೆಳೆಸಲಾಗುತ್ತದೆ. ಹೀಗೆ ಐದಾರು ವರ್ಷಗಳ ಹಿಂದೆ ಅರಣ್ಯ ಇಲಾಖೆ ನೆಟ್ಟಿದ್ದ ಗಿಡಗಳು ಮರಗಳಾಗಿವೆ. ಅಂಥ ಮರಗಳು ವಿದ್ಯುತ್ ಲೈನ್ಗೆ ಅಡ್ಡಿಯಾಗಿವೆ ಎಂದು ಮೆಸ್ಕಾಂನಿಂದ ಎಲ್ಲ ಕೊಂಬೆಗಳನ್ನು ಕತ್ತರಿಸಿದ್ದಾರೆ.
ಮರದ ಕೊಂಬೆಗಳು ವಿದ್ಯುತ್ ತಂತಿಗೆ ತಗುಲಿದರೆ ಲೈನ್ ಸಮಸ್ಯೆಯಾಗುತ್ತದೆ. ಅದಕ್ಕಾಗಿ ತಂತಿಗೆ ತಾಗುವ ಕೊಂಬೆಗಳನ್ನು ಮಾತ್ರ ಕತ್ತರಿಸಲು ಅವಕಾಶವಿದೆ. ಆದರೆ ಇಲ್ಲಿ ಮರದ ಎಲ್ಲ ಕೊಂಬೆಗಳನ್ನು ಕತ್ತರಿಸಿದ್ದಾರೆ.
ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಪ್ರತಿ ವರ್ಷ ಹಣ ಖರ್ಚು ಮಾಡುತ್ತದೆ. ಯಾರೇ ಮರಗಳನ್ನು ಕಡಿದರೆ ಕಾನೂನು ಕ್ರಮ ಜರುಗಿಸುವ ಅಧಿಕಾರ ಕೂಡ ಅರಣ್ಯ ಇಲಾಖೆಗಿದೆ. ಆದರೆ ಮೆಸ್ಕಾಂ ಸಿಬ್ಬಂದಿ ರಸ್ತೆ ಬದಿಯ ಮರಗಳನ್ನು ಬೇಕಾಬಿಟ್ಟಿ ಕಡಿದಿದ್ದರು ಅರಣ್ಯ ಇಲಾಖೆ ದಿವ್ಯ ಮೌನ ವಹಿಸಿದೆ.
ಮೆಸ್ಕಾಂ ಮತ್ತು ಅರಣ್ಯ ಇಲಾಖೆ ನಡುವಿನ ಸಮನ್ವಯದ ಕೊರತೆ ಈ ರೀತಿಯಾಗಲು ಕಾರಣ ಎನ್ನುತ್ತಾರೆ ಪರಿಸರವಾದಿ ಬೀರೂರಿನ ಬಳೆಗಾರ್ ಮಹೇಶ್ವರಪ್ಪ. ಗಿಡ ನೆಡುವ ಮೊದಲು ಅರಣ್ಯ ಇಲಾಖೆ ಸಿಬ್ಬಂದಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೆ ವಿದ್ಯುತ್ ಲೈನ್ ಎಲ್ಲಿ ಅಳವಡಿಸಲಾಗುತ್ತದೆ ಎಂಬುದು ತಿಳಿಯುತ್ತದೆ. ಅಂಥ ಜಾಗವನ್ನು ಬಿಟ್ಟು ಬೇರೆಡೆ ಗಿಡಗಳನ್ನು ನೆಡಬಹುದು.
ಸರ್ಕಾರ ನಿಗದಿಪಡಿಸಿದಷ್ಟು ಗಿಡಗಳನ್ನು ನೆಡಲು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಗುರಿ ಸಾಧಿಸುವುದು ಮುಖ್ಯವಾಗಿರುತ್ತದೆ. ಹಾಗಾಗಿ ಅರಣ್ಯ ಇಲಾಖೆ ಮುಂದಾಲೋಚಿಸದೆ ಗಿಡಗಳನ್ನು ನೆಡುತ್ತಿರುವುದು ಇಂಥ ಅಚಾತುರ್ಯಗಳಿಗೆ ಕಾರಣವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಅಧಿಕಾರಿಗಳು ಕಾಳಜಿಯಿಂದ ಕೆಲಸ ಮಾಡಿದರೆ ಯೋಜನೆಗಳು ಸಫಲವಾಗುತ್ತವೆ. ಇಲ್ಲವಾದರೆ ಇಂಥ ಸಾಮಾನ್ಯ ವಿಷಯದಲ್ಲಿ ಜನರ ಟೀಕೆಗೆ ಗುರಿಯಾಗಬೇಕಾಗುತ್ತದೆ.