ರೋಣ: ಗಲೀಜು ನೀರಿನಿಂದ ಗಬ್ಬು ನಾರುತ್ತಿರುವ ಶಾಲೆ ಮೈದಾನ. ಅಲ್ಲಿಯೇ ತಮ್ಮ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ಗಳನ್ನು ತಂದು ನಿಲ್ಲಿಸುತ್ತಿರುವ ಜನರು. ಇದರಿಂದಾಗಿ ಮಕ್ಕಳು ಹಾಗೂ ಪಾಲಕರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.
ಮಲ್ಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದ ಸ್ಥಿತಿಯಿದು. 1836ರಲ್ಲಿ ನಾಲ್ಕು ಎಕರೆ ಭೂಮಿಯಲ್ಲಿ ನಿರ್ವಣವಾದ ಈ ಶಾಲೆಯು ಸುತ್ತಲಿನ ಐದಾರು ಗ್ರಾಮಗಳ ಮಕ್ಕಳಿಗೆ ಶಿಕ್ಷಣ ನೀಡುವ ವಿದ್ಯಾ ಕೇಂದ್ರವಾಗಿತ್ತು. ಆದರೀಗ ಶಾಲೆ ಮೈದಾನದ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಖುಷಿಯಿಂದ ಆಟವಾಡುವ ಭಾಗ್ಯವಿಲ್ಲದಂತಾಗಿದೆ. ಇದು ಈ ವರ್ಷದ ಸಮಸ್ಯೆಯಲ್ಲ, ಹಲವು ವರ್ಷಗಳಿಂದ ಇದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಷ್ಟಾದರೂ ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
1 ರಿಂದ 7ನೇ ತರಗತಿವರೆಗಿನ ಶಾಲೆಯಲ್ಲಿ 9 ಶಿಕ್ಷಕರಿದ್ದು, 310 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆ ಮುಂದೆ ವಿಶಾಲವಾದ ಆಟದ ಮೈದಾನವಿದ್ದರೂ ಮಕ್ಕಳಿಗೆ ಪ್ರಯೋಜನವಾಗುತ್ತಿಲ್ಲ. ಈ ಕುರಿತು ಶಿಕ್ಷಣ ಇಲಾಖೆ ಮೇಲಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಅನೇಕ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.| ಆರ್.ಎಲ್. ಜಿಗಳೂರ, ಶಾಲೆ ಮುಖ್ಯೋಪಾಧ್ಯಾಯ
ಮಲ್ಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕಾಂಪೌಂಡ್ ಕಟ್ಟಲು ಗ್ರಾಮದ ಜನರು ಬಿಡುತ್ತಿಲ್ಲ. ನೂರಾರು ವರ್ಷಗಳಿಂದ ಗ್ರಾಮದ ದೇವರನ್ನು ಶಾಲೆ ಆವರಣದ ಮೂಲಕವೇ ಮೆರವಣಿಗೆಯಲ್ಲಿ ತರುವ ವಾಡಿಕೆ ಇದೆಯಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಶಾಲೆಯ ಕಾಂಪೌಂಡ್ ಕಟ್ಟಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಗ್ರಾಮಸ್ಥರು ತಮ್ಮ ಎತ್ತು, ಚಕ್ಕಡಿಗಳನ್ನು ತಂದು ಶಾಲೆಯ ಕಾಂಪೌಂಡ್ನಲ್ಲಿ ನಿಲ್ಲಿಸುತ್ತಿದ್ದಾರೆ.| ಎನ್. ನಂಜುಂಡಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ
ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆಗೆ ಮೈದಾನ ಇದ್ದೂ ಇಲ್ಲದ ಪರಿಸ್ಥಿತಿ ನಿರ್ವಣವಾಗಿದೆ. ಅಲ್ಲಿ ದನ-ಕರುಗಳನ್ನು ತಂದು ಕಟ್ಟುತ್ತಾರೆ. ಅನೇಕರು ತಮ್ಮ ಚಕ್ಕಡಿ, ಟ್ರ್ಯಾಕ್ಟರ್ಗಳನ್ನು ನಿಲ್ಲಿಸುತ್ತಾರೆ. ಈ ಕುರಿತು ಶಿಕ್ಷಣ ಇಲಾಖೆಯವರಿಗೆ, ಗ್ರಾಪಂನವರು ಸೇರಿ ಜನಪ್ರತಿನಿಧಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಯಿಂದ ಹೆಸರು ಕಿತ್ತುಕೊಂಡು ಹೋಗಿ ಪಟ್ಟಣದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. | ಶರಣಪ್ಪ ಹೊಸೂರ, ಮಲ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ