ಹಾಸನ: ಕೈವಾರ ತಾತಯ್ಯ ಅವರ ಚರಿತ್ರೆಯನ್ನು ಯುವಕರು ಓದಿ ಅವರ ದಾರಿಯಲ್ಲಿ ನಡೆದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯ ಕಾರ್ ನಿಲ್ದಾಣದಲ್ಲಿ ಸೋಮವಾರ ಜಿಲ್ಲಾ ಬಲಿಜ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಮೊದಲ ಬಾರಿಗೆ ಕೈವಾರ ತಾತಯ್ಯ ಜಯಂತಿ ಆಚರಣೆಗಾಗಿ ಬಂದಿದ್ದು, ಅವರ ಪುಸ್ತಕವನ್ನು ಓದಿದಾಗ ಹಲವಾರು ವಿಚಾರ ನಮಗೆ ತಿಳಿದಿವೆ. ಅನೇಕ ವಿಚಾರಗಳ ಮೇಲೆ ಅವರು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು. ಅನೇಕರಿಗೆ ತಾತಯ್ಯ ಅವರ ಸಾಧನೆ, ಸಮಾಜಕ್ಕೆ ಅವರು ನ್ಯಾಯ ಕೊಡಿಸುವ ವಿಚಾರ ಗೊತ್ತಿರುವುದಿಲ್ಲ. ಅವರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕಿದೆ ಎಂದು ಸಲಹೆ ನೀಡಿದರು.
ಯುವಕರು ಅವರ ಚರಿತ್ರೆ ಬಗ್ಗೆ ಓದುವ ಕೆಲಸ ಮಾಡಿದರೆ, ತಾತಯ್ಯ ಅವರ ದಾರಿಯಲ್ಲಿ ನಡೆದು ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು. 110 ವರ್ಷ ಬದುಕಿದ್ದ ಕೈವಾರ ತಾತಯ್ಯ ಅವರು ಚಿಕ್ಕ ವಯಸ್ಸಿನಲ್ಲಿಯೇ ಮುನಿಯಮ್ಮ ಎಂಬುವರನ್ನು ಮದುವೆ ಆಗಿದ್ದರು. ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಅವರು ಮಾಡಿದಂತಹ ಕಾರ್ಯ ಅಪಾರವಾಗಿದೆ. ಅವರು ಸಾಹಿತಿಯಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡಲಿಲ್ಲ. ಹಲವಾರು ವಿಚಾರಗಳಲ್ಲಿ ಅವರು ಯಾವ ರೀತಿ ಸಮಾಜದಲ್ಲಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆಯೂ ತಿಳಿಸಿಕೊಟ್ಟ ಪುಣ್ಯ ಪುರುಷರಾಗಿದ್ದಾರೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯ ಜಯಂತಿ ಅಂಗವಾಗಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಇದೇ ವೇಳೆ ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಎಂ.ಕೆ. ಕಮಲ್ ಕುಮಾರ್, ವರದರಾಜು, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರ್ಷಿತ್, ಧರ್ಮ, ಮೂರ್ತಿ, ಹರೀಶ್, ರಮೇಶ್, ಶಿವು ಇತರರು ಉಪಸ್ಥಿತರಿದ್ದರು.