ಹುಮನಾಬಾದ್: ಬೀದರ್-ಕಲಬುರಗಿ ರಾಜ್ಯ ಹೆದ್ದಾರಿಯ ಹಳ್ಳಿಖೇಡ (ಕೆ) ಗ್ರಾಮದಲ್ಲಿ ಬುಧವಾರ ಶ್ರೀ ಕೈಲಾಸನಾಥೇಶ್ವರರ ೨೫ನೇ ಜಾತ್ರಾ ಮಹೋತ್ಸವ ನಿಮಿತ್ತ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ವೈಭವದ ಪಲ್ಲಕ್ಕಿ ಉತ್ಸವ ಜರುಗಿತು.
ಜಾತ್ರೋತ್ಸವ ಹಾಗೂ ಮಹಾಶಿವರಾತ್ರಿ ನಿಮಿತ್ತ ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಅಲಂಕೃತಗೊಂಡ ದೇವಸ್ಥಾನದಲ್ಲಿ ಬೃಹದಾಕಾರದ ಶಿವನ ಮೂರ್ತಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಮಹಾಭಿಷೇಕ ಜರುಗಿದವು. ನಂತರ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಪಲ್ಲಕ್ಕಿ ಉತ್ಸವ ವೈಭವದಿಂದ ಸಾಗಿತು.
ಕುಂಭ ಕಳಶ ಹೊತ್ತ ಮಹಿಳೆಯರು, ವಿಶೇಷ ಡೊಳ್ಳು ಕುಣಿತ ಪ್ರದರ್ಶನ, ಲಂಬಾಣಿ ಮಹಿಳೆಯರ ಜಾನಪದ ನೃತ್ಯ, ಪುರವಂತರ ವೀರಗಾಸೆ, ಮಹಾರಾಷ್ಟ್ರದ ವಿಶೇಷ ಜಾನಪದ ನೃತ್ಯ, ಚಿಟಕಿ ಭಜನೆ ಹಾಗೂ ವಿವಿಧ ಭಜನೆ ತಂಡಗಳ ಭಜನೆ ಪಲ್ಲಕ್ಕಿ ಉತ್ಸವದ ಮೆರಗು ಹೆಚ್ಚಿಸಿದವು. ೫೦ ಅಡಿ ಎತ್ತರದ ಶ್ರೀ ಕೈಲಾಸನಾಥೇಶ್ವರರ ಮೂರ್ತಿ ಸದಾ ನೋಡುಗರ ಕಣ್ಮನ ಸೆಳೆಯುವುದು ಒಂದಡೆಯಾದರೆ, ಮಹಾಶಿವರಾತ್ರಿ ದಿನ ಹೆದ್ದಾರಿಯಲ್ಲಿ ಹೋಗಿ ಬರುವ ಜನರು ಸಹ ನಿಂತು ಶಿವನ ದರ್ಶನ ಪಡೆಯುತ್ತಿರುವುದು ಕಂಡಿತು. ಪ್ರಮುಖರು, ಗಣ್ಯರು ಸೇರಿ ಅಪಾರ ಭಕ್ತರು ದೇವರ ದರ್ಶನ ಪಡೆದರು.
ಸಂಜೆ ದೇವಸ್ಥಾನ ಆವರಣದಲ್ಲಿ ಭಕ್ತರು ಪಾಲ್ಗೊಂಡು ಲಿಂಗ ಪೂಜೆ ಸಲ್ಲಿಸಿದರು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಕೆಎಂಎಫ್ ನಿರ್ದೇಶಕ ರೇವಣಸಿದ್ದಪ್ಪ ಪಾಟೀಲ್, ಬಿಜೆಪಿ ಮುಖಂಡರಾದ ಸಂತೋಷ ಪಾಟೀಲ್, ವಿಶ್ವನಾಥ ಪಾಟೀಲ್ ಮಾಡಗೂಳ, ಪ್ರಮುಖರಾದ ಶಿವಪುತ್ರಪ್ಪ ವಾರದ, ಮೋಹನ ವಾರದ, ಸುಭಾಷ ವಾರದ, ಸುಭಾಷ ಚಿಲಶೆಟ್ಟಿ, ಅಣ್ಣೆಪ್ಪ ರಟಕಲ್, ಭಕ್ತರಾಜ ಚಿತ್ತಾಪುರೆ, ಭೀಮಶಾ ಕೋರಿ, ರಮೇಶ ವಾರದ, ಉದಯಕುಮಾರ ವಾರದ, ಇಂದ್ರಕರಣ ಬಿರಾದಾರ, ನಾಗಣ್ಣ ಚಿಕ್ಕಪಾಟೀಲ್, ಶರಣಪ್ಪ ಪರಶೆಟ್ಟಿ, ಮಲ್ಲಯ್ಯ ಚಿಕ್ಕಮಠ, ಗುರುಬಸಯ್ಯ ಮಠ, ಸಿದ್ರಾಮ ಇಂಡಿ, ಮಹೇಶ ಚಿಲ್ಲಶೆಟ್ಟಿ, ಚಂದ್ರಕಾಂತ ಕುಂಬಾರ, ಮಹೇಂದ್ರ ವಾರದ, ಮೈಲಾರಿ ಇತರರು ಪಾಲ್ಗೊಂಡಿದ್ದರು.