ಜಿಲ್ಲೆ

ಕೈಮುಗಿದು ಕೇಳ್ತೀನಿ ಬಿಜೆಪಿ ಗೆಲ್ಲಿಸಬೇಡಿ ; ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ತುಮಕೂರು : ಅತೀ ಮಳೆಯಿಂದ ರಾಜ್ಯದಲ್ಲಿ ಜನರು ಸಂಕಷ್ಟದಲ್ಲಿದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಸಿನಿಮಾ ಬಿಡುಗಡೆ ಕಾರ್ಯಕ್ರಮಗಳನ್ನು ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ, ಕೈಮುಗಿದು ಕೇಳ್ತೀನಿ ಬಿಜೆಪಿ ಗೆಲ್ಲಿಸಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ನಗರದಲ್ಲಿ ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ ಜನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟ ಬಿಟ್ಟರೆ ನಡೆದಿರುವ ಸುದೀರ್ಘ ರೈತ ಹೋರಾಟ ದೆಹಲಿಯಲ್ಲಿ ನಡೆದಿದೆ, ಪ್ರಧಾನಿ ಮೋದಿಗೆ 700 ರೈತರು ಸಾವನ್ನಪ್ಪಿದ ಮೇಲೆ ಜ್ಞಾನೋದಯವಾಗಿದೆ, ಕಾಯ್ದೆ ವಾಪಾಸ್ ಪಡೆಯಲು ಮುಂದಾಗಿದ್ದಾರೆ, ರೈತರ ಸಾವಿನ ಹೊಣೆ ಮೋದಿ ಸರ್ಕಾರವೇ ಹೊರಬೇಕು ಎಂದರು.

ಜನರ ಆಕ್ರೋಶಕ್ಕೆ ಮಣಿಯದ ಸರ್ಕಾರಗಳೇ ಇಲ್ಲ, ದೇಶದಲ್ಲಿ ರೈತರ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ, ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ, ಜನಶಕ್ತಿಯ ಮುಂದೆ ರಾಜ್ಯಶಕ್ತಿ ಏನು ಮಾಡಲು ಸಾಧ್ಯವಿಲ್ಲ ಎಂಬುದನ್ನು ರೈತ ಚಳವಳಿ ಮಾಡಿ ತೋರಿಸಿದೆ, ಕೇಂದ್ರ ಸರ್ಕಾರ ರೈತರಿಗೆ ಕೂಡಲೇ ಪರಿಹಾರ ನೀಡಬೇಕು, ಎಲ್ಲ ಮೊಕದ್ದಮೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ದೇಶದ ಇತಿಹಾಸದಲ್ಲಿ ನೂರು ಪಟ್ಟು ಬೆಲೆ ಏರಿಕೆ ಆಗಿರುವುದು ಇದೇ ಮೊದಲು, ಬಿಜೆಪಿಗರು ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳವಾದಾಗ ಬೀದಿಗೆ ಇಳಿಯುತ್ತಿದ್ದರು, ಈಗ ಅವರೆಲ್ಲ ಎಲ್ಲಿದ್ದಾರೆ? ಅವರಿಗೆ ನಾಚಿಕೆಯಾಗುವುದಿಲ್ಲ. ಹೆಣ್ಣು ಮಕ್ಕಳು ತೀರ್ಮಾನ ತೆಗೆದುಕೊಂಡು ಈ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಕರೊನಾ ಸಂಕಷ್ಟದ ಪರಿಹಾರಕ್ಕೆ ಸರ್ಕಾರ ಘೋಷಿಸಿದ್ದ ಹಣ ಇನ್ನೂ ಜನರಿಗೆ ತಲುಪಿಲ್ಲ, ದೇಶ ಮತ್ತು ರಾಜ್ಯದಲ್ಲಿರುವುದು ಭ್ರಷ್ಟ ಸರ್ಕಾರ, ಕಾಂಗ್ರೆಸ್ ಮಾಡಿರುವ ದೇಶದ ಆಸ್ತಿಗಳನ್ನೆಲ್ಲಾ ಮಾರಲು ಹೊರಟಿದ್ದಾರೆ, ರಾಷ್ಟ್ರೀಕರಣದ ಮೂಲಕ ಕಾಂಗ್ರೆಸ್ ದೇಶದ ಆಸ್ತಿ ಮಾಡಿದರೆ, ಬಿಜೆಪಿ ಒಂದೊಂದಾಗಿ ಖಾಸಗಿಕರಣದ ಮೂಲಕ ಮಾರಾಟಕ್ಕಿಟ್ಟಿದೆ ಎಂದರು.

ಉತ್ತರಪ್ರದೇಶ, ಪಂಜಾಬ್ ಚುನಾವಣೆ ಹಿನ್ನೆಲೆಯಲ್ಲಿ ತೈಲಬೆಲೆ ಇಳಿಕೆ ಮಾಡಿದೆ, ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಸೋಲಿನ ಭಯ ಬಿಜೆಪಿಯನ್ನೂ ಕಾಡುತ್ತಿದೆ, ರೈತ ಹೋರಾಟದಲ್ಲಿ ಸಾವನ್ನಪ್ಪಿದವರನ್ನು ಹುತಾತ್ಮರೆಂದು ಘೋಷಿಸಿ ಕೂಡಲೇ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಎಐಸಿಸಿ ಶಿಸ್ತು ಸಮಿತಿ ಸದಸ್ಯ ಡಾ.ಜಿ.ಪರಮೇಶ್ವರ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ತುಮಕೂರು ಜಿಲ್ಲೆಯ ಪಾತ್ರ ದೊಡ್ಡದಿದೆ, ಇಲ್ಲಿ ಸಮಾವೇಶ ಆರಂಭಿಸುವುದು ಪಕ್ಷಕ್ಕೆ ಶುಭ ಸೂಚನೆಯಾಗಿದ್ದು 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ, ಇದಕ್ಕೆ ಪೂರಕವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯವನ್ನು ಜಾಗೃತಿ ಸಮಾವೇಶದಲ್ಲಿ ಜನರಿಗೆ ತಿಳಿಸಬೇಕಿದೆ ಎಂದರು.

ದೇಶದಲ್ಲಿ 54 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಮಾಡಿರುವ ಸಾಧನೆಯ ಬಗ್ಗೆಯಷ್ಟೇ ಇಂದಿನ ಪ್ರಧಾನಿ ವಿದೇಶಗಳಲ್ಲಿ ಮಾತನಾಡಲು ಸಾಧ್ಯ, ನೀರಾವರಿ, ಶಿಕ್ಷಣ, ಸಾರಿಗೆ ಹಾಗೂ ಕೃಷಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರವಷ್ಟೇ ಸಾಧನೆ ಮಾಡಿದೆ, ಇಂದಿನ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ ಎಂದರು.

ಶಾಸಕರಾದ ವೆಂಕಟರಮಣಪ್ಪ, ಡಾ.ಎಚ್.ಡಿ.ರಂಗನಾಥ್, ರಾಜ್ಯಸಭೆ ಸದಸ್ಯ ಚಂದ್ರಶೇಖರ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಕೆ.ಷಡಕ್ಷರಿ, ಕೆ.ಲಕ್ಕಪ್ಪ ಮತ್ತಿತರರು ಇದ್ದರು.

ಹೆಚ್ಚು, ಕಡಿಮೆ ರಾಜೇಂದ್ರನೇ ಅಭ್ಯರ್ಥಿ.. : ಅಭ್ಯರ್ಥಿ ಘೋಷಣೆಗೂ ಪೂರ್ವದಲ್ಲಿಯೇ ನಡೆದ ಜಾಗೃತಿ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರ ಕಾಂಗ್ರೆಸ್ ಅಭ್ಯರ್ಥಿಯಾಗುವುದನ್ನು ದೃಢಪಡಿಸಿದರು. ವೇದಿಕೆಯಲ್ಲಿ ಸಿದ್ದರಾಮಯ್ಯ ಮಾತನಾಡುವಾಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶವಿದೆ. ನೂರಕ್ಕೆ ನೂರು ಗೆಲ್ತೀವಿ, ಹೆಚ್ಚು ಕಡಿಮೆ ಆರ್.ರಾಜೇಂದ್ರ ಅಭ್ಯರ್ಥಿ ಆಗಬಹುದು, ಅವರನ್ನೇ ಗೆಲ್ಲಿಸಿ ಪರಿಷತ್‌ಗೆ ಕಳುಹಿಸಬೇಕು, ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತದಾರರ ಮನವೊಲಿಸಬೇಕು ಎಂದರು.

ಜಿಲ್ಲೆಯ ವಿಧಾನ ಪರಿಷತ್ ಸ್ಥಾನದೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹತ್ತು ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲಬೇಕು, ಬಿಜೆಪಿಯವರ ಕಪಟವನ್ನು, ಭ್ರಷ್ಟಾಚಾರ, ವೈಫಲ್ಯವನ್ನು ಜನರ ಮುಂದಿಟ್ಟು ಬೆತ್ತಲೆ ಮಾಡುವ ಉದ್ದೇಶದಿಂದಲೇ ರಾಜ್ಯದೆಲ್ಲೆಡೆ ಜನಜಾಗೃತಿ ಅಭಿಯಾನ ಆರಂಭಿಸಿದ್ದೇವೆ ಎಂದರು.

ವೇದಿಕೆಯಲ್ಲಿ ಕೂರದ ನಾಯಕರು.. : ಪುಡಿ ನಾಯಕರಿಂದಲೇ ತುಂಬಿರುತಿದ್ದ ಕಾಂಗ್ರೆಸ್ ಕಾರ್ಯಕ್ರಮಕ್ಕೆ ವಿಭಿನ್ನವಾಗಿ ನಡೆದ ಭಾನುವಾರದ ಜನ ಜಾಗೃತಿ ಅಭಿಯಾನ ಗಮನ ಸೆಳೆಯಿತು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಸೇರಿ ಯಾವೊಬ್ಬ ನಾಯಕನೂ ವೇದಿಕೆಯಲ್ಲಿ ಕೂರದೇ ಮುಂಭಾಗದ ಮೊದಲ ಸಾಲಿನಲ್ಲಿ ಕುಳಿತಿದ್ದರು. ಉದ್ಘಾಟನೆ ಸಂದರ್ಭದಲ್ಲಿ ಎಲ್ಲ ಮುಖಂಡರು ವೇದಿಕೆಯಲ್ಲಿ ಕಾಣಿಸಿಕೊಂಡರು. ಉಳಿದಂತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ತಮ್ಮ ಸರದಿ ಬಂದಾಗ ವೇದಿಕೆಯೇರಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಯಾವೊಬ್ಬ ಮುಖಂಡರಿಗೂ ಮಾತನಾಡಲು ಅವಕಾಶ ಸಿಗಲಿಲ್ಲ, ಎಂದಿನ ನೂಕುನುಗ್ಗಲು ಇಲ್ಲದೆ ಅರ್ಥಪೂರ್ಣವಾಗಿ ವೇದಿಕೆ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗ್ರಾಮ ಸ್ವರಾಜ್ಯಕ್ಕೆ ವಿರುದ್ಧವಾಗಿದ್ದ ಬಿಜೆಪಿಗೆ ಮತ ನೀಡಬೇಕಂತೆ, ಗ್ರಾಮಕ್ಕೆ ಅಧಿಕಾರ ಮತ್ತು ಅನುದಾನ ಕೊಟ್ಟಿದ್ದು ಕಾಂಗ್ರೆಸ್. ನರೇಗಾ ಯೋಜನೆ ಜಾರಿಗೊಳಿಸಿದ್ದು ಡಾ.ಮನಮೋಹನ್‌ಸಿಂಗ್ ಹೊರತು ನರೇಂದ್ರ ಮೋದಿ ಅಲ್ಲ, ವೋಟು ಕೊಟ್ರೆ ಗ್ರ್ಯಾಂಟು ಕೊಡ್ತೀವಿ ಎನ್ನುತ್ತಿರುವವರಿಗೆ ಬುದ್ಧಿ ಇದೆಯೇ? ಕನಿಷ್ಠ 15 ಸ್ಥಾನ ಕಾಂಗ್ರೆಸ್ ಗೆಲ್ಲಬೇಕು. ಸಿದ್ದರಾಮಯ್ಯ ವಿಪಕ್ಷ ನಾಯಕ