ಜಿಲ್ಲೆ

ಕೈಬಿಟ್ಟಿರುವ ಪೌರಕಾರ್ಮಿಕರನ್ನು ನೇಮಿಸಲು ಆಗ್ರಹ

ಮೈಸೂರು: ಆಯ್ಕೆ ಸಂದರ್ಭದಲ್ಲಿ ಕೈಬಿಟ್ಟಿರುವ ಪೌರಕಾರ್ಮಿಕರನ್ನು ಕೂಡಲೇ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪೌರಕಾರ್ಮಿಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದು, ಇದನ್ನು ಕಲ್ಪಿಸಿಕೊಡುವಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ಹೀಗಾಗಿ, ಇಎಸ್‌ಐ, ಪಿಎಫ್, ಆರೋಗ್ಯ ಕಾರ್ಡ್ ನೀಡಿಲ್ಲ. ಇದರಿಂದ ಕಷ್ಟವನ್ನು ಅನುಭವಿಸಬೇಕಾಗಿದೆ. ಜತೆಗೆ, ನೇರ ನೇಮಕಾತಿ ಸಂದರ್ಭದಲ್ಲಿ ಕೆಲ ಪೌರಕಾರ್ಮಿಕರನ್ನು ಕೈಬಿಡಲಾಗಿದೆ. ಇವರನ್ನು ನೇಮಕಾತಿ ಮಾಡಬೇಕು. 60 ವರ್ಷ ಮೀರಿರುವ ಪೌರಕಾರ್ಮಿಕರ ಅವಲಂಬಿತರಲ್ಲಿ ಒಬ್ಬರಿಗೆ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.
ಪೌರಕಾರ್ಮಿಕರಿಗೆ ನಿವೇಶನ ಅಥವಾ ಮನೆಯನ್ನು ಕಟ್ಟಿಸಿಕೊಡಬೇಕು. ಕೆಲಸದ ಸಂದರ್ಭದಲ್ಲಿ ಮೃತಪಟ್ಟ ಪೌರಕಾರ್ಮಿಕರ ಸದಸ್ಯರೊಬ್ಬರಿಗೆ ಕೆಲಸ ನೀಡಿ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಡಿ.ಆರ್.ಚಿನ್ನಪ್ಪ, ಕೆ.ಗೋಪಾಲ್ ಇದ್ದರು.