ಜಿಲ್ಲೆ

ಕೈನಿಂದ ಮಹಿಳೆಯರಿಗೆ ರಾಜಕೀಯ ಮೀಸಲಾತಿ, ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ, ದೊಡ್ಡಬಳ್ಳಾಪುರದಲ್ಲಿ ನವಸಂಕಲ್ಪ ಚಿಂತನ ಶಿಬಿರದ ಸಮಾರೋಪ

ದೊಡ್ಡಬಳ್ಳಾಪುರ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಕಾರಕ್ಕೆ ಬಂದರೆ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33 ರಾಜಕೀಯ ಮೀಸಲಾತಿ ನೀಡಲಾಗುವುದು ಮಾಜಿ ಸಿಎಂ ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.

ನಗರದ ಸ್ಕೌಟ್ಸ್ ಕ್ಯಾಂಪ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ನವಸಂಕಲ್ಪ ಚಿಂತನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. ಸಂವಿಧಾನದ 74ನೇ ತಿದ್ದುಪಡಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮಹಿಳೆಯರಿಗೆ ರಾಜಕೀಯ ಮೀಸಲಾತಿ ಒದಗಿಸಲಾಗಿದೆ. ಆದರೆ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಮಹಿಳೆಯರಿಗೆ ಶೆ.33 ಮೀಸಲಾತಿ ಒದಗಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿಲ್ಲ. ಹಾಗಾಗಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದರು.

ಜೆಡಿಎಸ್ ಪಕ್ಷದವರು ಗೆದ್ದೆ ಎತ್ತಿನ ಬಾಲ ಹಿಡಿಯುವವರು. ಅವರ ಬಗ್ಗೆ ಹುಷಾರಾಗಿರಬೇಕು. ಜಾತಿ, ಧರ್ಮಗಳ ಮದ್ಯ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ಸರ್ಕಾರವನ್ನು ಮುಂದಿನ ಭಾರಿ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಆಡಳಿತದಲ್ಲಿ ರೂಪಿಸಿದ ಜನಕಲ್ಯಾಣ ಕಾರ್ಯಕ್ರಮಗಳು, ಅದಕ್ಕಾಗಿ ಬಿಡುಗಡೆ ಮಾಡಿದ ಅನುದಾನ, ವ್ಯವಯಿಸಿದ ಖರ್ಚುಗಳ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ನವ ಸಂಕಲ್ಪ ಶಿಬಿರದ ನಿರ್ಣಯಗಳ ಬಗ್ಗೆ ತಿಳಿಸಿದರು.

ಶಿಬಿರದಲ್ಲಿ ರಚಿಸಿದ್ದ 8 ಸಮಿತಿಗಳ ವರದಿಯನ್ನೂ ಸಂಗ್ರಹಿಸಿ ಸಮಗ್ರ ವರದಿಯನ್ನು ರಾಜ್ಯ ನಾಯಕರಿಗೆ ತಲುಪಿಸಲಾಗುವುದು. ಕೇಂದ್ರದ ಜನವಿರೋ ನೀತಿಗಳ ವಿರುದ್ಧ ಹೋರಾಟ ಹಾಗೂ ಪಕ್ಷ ಸಂಘಟನೆಗೆ ಒತ್ತು ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

ಶಾಸಕರಾದ ರಾಮಲಿಂಗಾರೆಡ್ಡಿ, ಶರತ್ ಬಚ್ಚೇಗೌಡ, ವಿಧಾನಪರಿಷತ್ ಸದಸ್ಯ ರವಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ, ಮುಖಂಡರಾದ ಕಮಲಾಕ್ಷೀ ರಾಜಣ್ಣ, ಮಾಜಿ ಮೇಯರ್ ಪದ್ಮಾವತಿ ಮತ್ತಿತರರು ಉಪಸ್ಥಿತರಿದ್ದರು.