ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಜತೆ ದೀಪಾವಳಿ ಹಬ್ಬ ಆಚರಿಸಿದರು.
ಹಣ್ಣು ಹಾಗೂ ಸಿಹಿ ತಿನಿಸು ಕೊಟ್ಟು ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಕೈದಿಗಳ ಸಂಭ್ರಮದಲ್ಲಿ ಭಾಗಿಯಾದರು.
ಕೈದಿಗಳ ಮೊಗದಲ್ಲಿ ಸಂತಸ ಮೂಡಿಸಲು ಅವರೊಂದಿಗೆ ದೀಪಾವಳಿ ಹಬ್ಬ ಆಚರಿಸಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ನಿತಿನ್ ಕರ್ಪೂರ ಹೇಳಿದರು.
ಯಾವುದೋ ಕೆಟ್ಟ ಗಳಿಗೆಯಲ್ಲಿ ತಪ್ಪುಗಳು ನಡೆದು ಹೋಗಿರುತ್ತವೆ. ಕೈದಿಗಳು ಮನಃ ಪರಿವರ್ತನೆ ಮಾಡಿಕೊಳ್ಳಬೇಕು. ಉತ್ತಮ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಕೈದಿಗಳಿಗೆ ದಂತ, ಚರ್ಮರೋಗ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಕಂಪ್ಯೂಟರ್ ಹಾರ್ಡ್‍ವೇರ್, ಮಡಿಕೆ ಸೇರಿ ಮಣ್ಣಿನ ವಸ್ತು, ಪೇಪರ್ ಕವರ್, ಬಟ್ಟೆ ಕೈಚೀಲ ತಯಾರಿಕೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಮನೋರೋಗ ತಜ್ಞೆ ಡಾ. ಶ್ವೇತಾ ಕುಣಕೇರಿ, ಜೈಲು ಅಧೀಕ್ಷಕ ಸಿದ್ದಪ್ಪ ಗೌಡ ಪಾಟೀಲ, ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಡಾ. ರಿತೇಶ ಸುಲೆಗಾಂವ್, ಖಜಾಂಚಿ ಸತೀಶ್ ಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಡಾ. ಕಪಿಲ್ ಪಾಟೀಲ, ಶ್ವೇತಾ ಮೇಗೂರ, ಜೈಲು ಸಿಬ್ಬಂದಿ ಇದ್ದರು.