ಜಿಲ್ಲೆ

ಕೈಗಾ 5 ಮತ್ತು 6 ನೇ ಘಟಕ ಯೋಜನಾ ನಿರ್ದೇಶಕ ಬಿ.ಕೆ.ಚೆನ್ನಕೇಶವ ಅವರಿಗೆ ಬೀಳ್ಕೊಡುಗೆ

ಕಾರವಾರ: ನಾನು ಇದ್ದಷ್ಟು ದಿನವೂ ಕೈಗಾದ ಅಭಿವೃದ್ಧಿಗಾಗಿ ಸಮರ್ಥವಾಗಿ, ಧಕ್ಷವಾಗಿ ಕಾರ್ಯ ನಿರ್ವಹಿಸಿದ್ದೇನೆ. ಮತ್ತು ಇಲ್ಲಿನ ಸಹ್ಯಾದ್ರಿ ಸಂಘದ ಕನ್ನಡದ ಕೆಲಸ ಮಾಡಲು ಸಿಕ್ಕಿರುವ ಅವಕಾಶ ನನ್ನ ಸೌಭಾಗ್ಯ ಎಂದುಕೊಂಡಿದ್ದೇನೆ ಎಂದು ಕೈಗಾ 5ಮತ್ತು6 ನೇ ಘಟಕದ ಯೋಜನಾ ನಿರ್ದೇಶಕ ಬಿ.ಕೆ.ಚನ್ನಕೇಶವ ಹೇಳಿದರು.

ಮಂಗಳವಾರ ಕೈಗಾ ಟೌನ್‌ಶಿಪ್‌ನ ಮನರಂಜನಾ ಸಭಾಗೃಹದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಿ.ಕೆ.ಚನ್ನಕೇಶವ ದಂಪತಿಯನ್ನು ಕೈಗಾದ ಸಹ್ಯಾದ್ರಿ ಕನ್ನಡ ಸಂಘದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಕೈಗಾ ಸ್ಥಳ ನಿರ್ದೇಶಕ ಪ್ರಮೋದ ರಾಯಚೂರ ಮಾತನಾಡಿ, ಚನ್ನಕೇಶವ ಅವರಂಥ ಯೋಜನಾ ನಿರ್ದೇಶಕರು ಸ್ಥಳೀಯ ಮತ್ತು ಪ್ರಾದೇಶಿಕ ಹಿನ್ನೆಲೆಯ ಕಾರಣ ಹೆಚ್ಚಿನ ಜನರೊಂದಿಗೆ ಅವರಿಗೆ ಪ್ರೀತಿಯ ಒಡನಾಟವಿದ್ದಿತ್ತು. ಅಲ್ಲದೇ ಯಾವಾಗಲೂ ನಿಗಮದ ಸೇವೆಗಾಗಿ ಮತ್ತು ಕನ್ನಡದ ಕಾರ್ಯಕ್ಕಾಗಿ ಮುಂದಾಗುತ್ತಿದ್ದರು. ಲಭ್ಯ ಇರುವ ಸಮಯದಲ್ಲಿ ಅವರ ನಿಗಮದ ಸೇವೆ ಮೆಚ್ಚುವಂಥದ್ದು. ಅವರಿಂದಾಗಿ ಹಲವು ರೀತಿಯ ಯೋಜನೇತರ ಕಾರ್ಯಗಳು ಶ್ಲಾಘಿಸುವಂತಾಗಿದೆ. ಅವರ ಸೇವಾವಧಿ ನಮಗೆ ಇನ್ನಿಷು ಕಾಲ ಬೇಕಿತ್ತು ಎಂದರು.

ಸಹ್ಯಾದ್ರಿ ಕನ್ನಡ ಸಂಘದ ಅಧ್ಯಕ್ಷ ಜೀತೆಂದ್ರ ಕುಮಾರ, ಚೆನ್ನಕೇಶವ ಅವರು ತಮ್ಮ ಸೇವೆಯಿಂದಾಗಿ ಯಾವಾಗಲೂ ನಮ್ಮೊಂದಿಗಿರುತ್ತಾರೆ. ಸಹ್ಯಾದ್ರಿ ಕನ್ನಡ ಸಂಘದ ಪ್ರಾಥಮಿಕ ಸ್ಥಾಪನಾ ಸದಸ್ಯತ್ವ ಕಾಲಾವಧಿಯಿಂದ ಹಿಡಿದು ಇಲ್ಲಿಯವರೆಗೂ ಅವರು ಕನ್ನಡ ಸಂಘದ ಕಾರ್ಯಕ್ರಮಗಳನ್ನು ಬೆಂಬಲಿಸಿ ವಿಭಿನ್ನವಾಗಿ ಬೆಳೆಯುವಂತೆ ಮಾಡುವಲ್ಲಿ ಅವರ ಪಾತ್ರ ದೊಡ್ಡದು" ಎಂದರು.

ಸಹ್ಯಾದ್ರಿ ಕನ್ನಡ ಸಂಘ ಬೆಳೆಯಲು ಮತ್ತು ಇವತ್ತು ದೊಡ್ಡ ಯೋಜನೆಗಳನ್ನು ರೂಪಿಸಿ, ಆರಂಭದ ಹಂತದಲ್ಲಿ ಕನ್ನಡ ಸಂಘವನ್ನು ಬೆಳೆಸಿದ ಚನ್ನಕೇಶವ ಅವರಂಥರಿಂದ ಆಗಲೂ ಮತ್ತು ಈಗಲೂ ನಮಗೆಲ್ಲ ಕಾರ್ಯಕ್ರಮಗಳನ್ನು ನಡೆಸಲು ತುಂಬ ಅನುಕೂಲವಾಗಿದೆ. ಪ್ರತಿಯೊಬ್ಬ ಯಶಸ್ವಿ ಅಧಿಕಾರಿಗಳ ಜೊತೆಗೆ ಅವರ ಕುಟುಂಬ ಸಹಕಾರವೂ ಅಷ್ಟೆ ಮಹತ್ವದ್ದಾಗಿರುತ್ತದೆ. ಹಾಗಾಗಿ ಇವತ್ತು ನಿಗಮಕ್ಕೆ ಅವರ ಸೇವೆಯಷ್ಟೆ ಅವರ ಕುಟುಂಬದ ಪಾಲುದಾರಿಕೆಯೂ ಮಹತ್ವದ್ದಾಗಿದೆ" ಎಂದು ಸಂಘದ ಪ್ರಧಾನ ಕಾರ್ಯದರ್ಶಿ, ಸಾಹಿತಿ ಸಂತೋಷಕುಮಾರ ಮೆಹೆಂದಳೆ, ದಂಪತಿಗಳ ಸನ್ಮಾನಕ್ಕೂ ಮುನ್ನ ಆಶಯ ಭಾಷಣದಲ್ಲಿ ಅಭಿಪ್ರಾಯಪಟ್ಟರು. ವಸತಿ ಸಂಕೀರ್ಣದ ಮಹಿಳೆಯರಿಂದ ಜನಪದ ಹಾಡು, ಪ್ರಿಯಾ ಸುಧೀಶ್, ಕುಮಾರಿ ಹರ್ಷಿತಾ, ಅನಾಮಿಕಾ, ದಿವ್ಯಾ, ಸೌಮ್ಯಾ, ಅಕ್ಷಯಾ ಇವರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕೈಗಾ 3ಮತ್ತು4ರ ಕೇಂದ್ರ ನಿರ್ದೇಶಕರ ಬಿ.ವಿನೋದ ಕುಮಾರ, 1ಮತ್ತು2ರ ಕೇಂದ್ರ ನಿರ್ದೇಶಕರ ವೈ.ಬಿ.ಭಟ್ಟ ಹಿರಿಯ ಅಧಿಕಾರಿಗಳಾದ ಅಮೋಲ ರೇವಣಕರ, ಎಚ್.ಎನ್.ರಮೇಶಾ, ಪಿ.ಎಫ್.ಪಂಡಿತ, ಶೇಷಪ್ಪನವರ ಮತ್ತಿತರರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ಶಿವಕುಮಾರ್ ಸೋಗಿ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಮಹಾಂತೇಶ ಸಜ್ಜನ ವಂದನಾರ್ಪಣೆ ಸಲ್ಲಿಸಿದರು.