ಜಿಲ್ಲೆ

ಕೈ ಸ್ಪಷ್ಟ ನಿರ್ಧಾರದಿಂದಲೇ ವಿಭಜನೆ

\ಹಿಂದಿನ ಸರ್ಕಾರದಿಂದ ಕುರುಡು ತೀರ್ಮಾನ | ಸಂಸದರಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಾಂಗ್

 ಚಿಂತಾಮಣಿ : ಕೋಚಿಮುಲ್ ವಿಭಜನೆ ಸಂಬಂಧ ಹಿಂದಿನ ಬಿಜೆಪಿ ಸರ್ಕಾರ ಕುರುಡಾಗಿ ಮಾಡಿದ್ದ ತೀರ್ಮಾನವನ್ನು ನಮ್ಮ ಸರ್ಕಾರ ಪರಾಮರ್ಶಿಸಿ ವಿಭಜನೆಗೆ ಸ್ಪಷ್ಟ ನಿರ್ಧಾರ ಕೈಗೊಂಡು ನ್ಯಾಯಾಲಯದ ಗಮನಕ್ಕೆ ತಂದ ನಂತರ ಘನ ನ್ಯಾಯಾಲಯ ವಿಭಜನೆ ತೀರ್ಪು ನೀಡಿದೆ ಎಂದು ಸಂಸದ ಡಾ.ಕೆ. ಸುಧಾಕರ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ತಿರುಗೇಟು ನೀಡಿದರು.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಚಿಂತಾಮಣಿ ಸರ್ಕಾರಿ ಬಾಲಕರ ಪದವಿ ಕಾಲೇಜು ಹಾಗೂ ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್‌ನ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಕೋಚಿಮುಲ್ ವಿಭಜನೆ ತೀರ್ಪು ಸತ್ಯಕ್ಕೆ ಸಂದ ಜಯ ಎಂಬ ಸಂಸದರ ಹೇಳಿಕೆಗೆ ಟಾಂಗ್ ನೀಡಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಹಾಲಿ ಸಂಸದ ಡಾ. ಕೆ. ಸುಧಾಕರ್ ಅವರು ಕೋಚಿಮುಲ್ ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಿದ್ದರು. ತಮ್ಮ ರಾಜಕೀಯ ಲಾಭಕ್ಕಾಗಿ ಯಾರನ್ನೋ ಅಧಿಕಾರದಲ್ಲಿ ಕೂರಿಸುವ ಸಲುವಾಗಿ ಸರ್ವಸದಸ್ಯರ ಸಭೆ ನಡೆಸದೆ, ಅಭಿಪ್ರಾಯ ಪಡೆಯದೆ ಕಣ್ಣುಮುಚ್ಚಿ ವಿಭಜನೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ವಿಭಜನೆ ಆದೇಶವನ್ನು ರದ್ದು ಮಾಡಿತ್ತು. ಇದು ಅಂದಿನ ಬಿಜೆಪಿ ಸರ್ಕಾರ ಏಕಾಏಕಿ ಮಾಡಿದ ಅದೇಶವಾಗಿದ್ದು, ಕೋಚಿಮುಲ್ ನಿದೇಶಕರ ಅವಧಿ ಇನ್ನು ಎರಡು ವರ್ಷವಿದ್ದರೂ ಮೊಟಕುಗೊಳಿಸಿ ನಿಷ್ಕ್ರಿಯಗೊಳಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಭಜನೆ ರದ್ದು ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದು ವಿವರಿಸಿದರು.

ವಿಭಜನೆಯಾದ ನಂತರ ಮಾಡಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಹ ಚರ್ಚೆ ನಡೆಸಿ ತೀರ್ಮಾನಿಸಿದ್ದಲ್ಲದೆ, ಕೋಚಿಮುಲ್ ವಿಭಜನೆಗೆ ಬಾಗೇಪಲ್ಲಿಯಲ್ಲಿ ಎಲ್ಲ ನಿರ್ದೇಶಕರ ಸಭೆ ಕರೆದು ವಿಭಜನೆಗೆ ಸಹಮತ ವ್ಯಕ್ತಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದಾಗ, ಸರ್ಕಾರ ಹೊಸ ಆದೇಶ ಹೊರಡಿಸಿ ನ್ಯಾಯಾಲಯದ ಗಮನಕ್ಕೆ ತಂದಿತ್ತು.

ನಂತರ ನ್ಯಾಯಾಲಯ ವಿಭಜನೆ ತೀರ್ಪು ನೀಡಿತು. ಸಂಸದರು ಹೇಳಿಕೆ ನೀಡುವ ಮುನ್ನ ಸ್ವಲ್ಪ ಬುದ್ಧಿವಂತಿಕೆ ಖರ್ಚು ಮಾಡಿ ಮಾತನಾಡಬೇಕು. ನ್ಯಾಯಾಲಯದ ಆದೇಶದಂತೆ ಆರು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಚುನಾವಣೆ ನಡೆಸುವುದಾಗಿ ಸಚಿವ ಸುಧಾಕರ್ ವಿವರಿಸಿದರು.

ಒಕ್ಕೂಟ ವಿಭಜನೆಯ ಎಲ್ಲ ಕ್ರೆಡಿಟ್ ಪಡೆದುಕೊಳ್ಳಲು ಸಂಸದರು ಮುಂದಾಗಿದ್ದಾರೆ. ಹಿಂದೆ ಆರೋಗ್ಯ ಸಚಿವರಾಗಿದ್ದಾಗ ಮೃತಪಟ್ಟ ಜನರ ಕ್ರೆಡಿಟ್ ಕೂಡ ಅವರಿಗೆ ಸಲ್ಲಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಸಚಿವ ಡಾ. ಎಂ.ಸಿ. ಸುಧಾಕರ್ ವ್ಯಂಗ್ಯವಾಡಿದರು.