ಜಿಲ್ಲೆ

ಕೈ ಮುಖಂಡರ ಮುನಿಸು ಬಹಿರಂಗ : ಹೊಸತನವಿಲ್ಲದ ಕಾಂಗ್ರೆಸ್​ ನವ ಸಂಕಲ್ಪ ಶಿಬಿರ, ಸಾಧ್ಯವಾಗದ ಜಿಲ್ಲಾಧ್ಯಕ್ಷರ ನೇಮಕ

ತುಮಕೂರು: ವಿಧಾನಸಭಾ ಚುನಾವಣೆ ಸಿದ್ಧತೆಗಾಗಿ ಕಾಂಗ್ರೆಸ್​ ಆರಂಭಿಸಿರುವ ನವಸಂಕಲ್ಪ ಚಿಂತನಾ ಶಿಬಿರ ಕಾಯಕರ್ತರಲ್ಲಿ ಉತ್ಸಾಹ ಮೂಡಿಸುವಲ್ಲಿ ವಿಫಲವಾಗಿದೆ.

ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್​.ರಾಜಣ್ಣ ಹಾಗೂ ಜಿಲ್ಲಾಧ್ಯಕ್ಷ ಆರ್​.ರಾಮಕೃಷ್ಣ ನಡುವಿನ ಮುಸುಕಿನ ಗುದ್ದಾಟ ಶಿಬಿರದಲ್ಲಿ ಬಹಿರಂಗವಾಗಿದ್ದು, ಜಿಲ್ಲೆಯ ಎಲ್ಲ ಹಿರಿಯ ಮುಖಂಡರ ನಡುವೆ ಸಂಬಂಧ ಹಳಸಿದೆ ಎಂಬ ಸಂದೇಶವನ್ನೇ ಸಾರಿದೆ. ವಿಧಾನ ಪರಿಷತ್​ ಸದಸ್ಯ ಆರ್​.ರಾಜೇಂದ್ರ ಕೂಡ ವೇದಿಕೆಯಲ್ಲಿ ಮಾತನಾಡುವಾಗ ನನ್ನ ಸೋಲಿಸಲು ಶ್ರಮಿಸಿದವರಿಗೆ ಕೆಪಿಸಿಸಿ ಮಣೆ ಹಾಕಿ ಪಕ್ಷದಲ್ಲಿ ಹೊಣೆ ನೀಡಿರುವುದು ಸರಿಯಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸತ್ಯ ತಿಳಿಸಿದೆ.

ಜಿಲ್ಲಾ ಕಾಂಗ್ರೆಸ್​ನಲ್ಲಿನ ಗುದ್ದಾಟ ಮೇಲ್ನೋಟಕ್ಕೆ ಕೆ.ಎನ್​.ರಾಜಣ್ಣ ಹಾಗೂ ಆರ್​.ರಾಮಕೃಷ್ಣ ನಡುವೆ ಎನಿಸಿದರೂ ಆರ್​.ರಾಮಕೃಷ್ಣ ಅವರ ಹಿಂದೆ ಡಾ.ಜಿ.ಪರಮೇಶ್ವರ ಇದ್ದಾರೆ ಎಂಬುದು ಜಿಲ್ಲೆಯಲ್ಲಿ ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಹಾಗಾಗಿ, ಜಿಲ್ಲೆಯ ಇಬ್ಬರು ಪ್ರಭಾವಿ ಮುಖಂಡರೇ ಜಿದ್ದಾಜಿದ್ದಿಗೆ ಬಿದ್ದಿರುವುದು ಭವಿಷ್ಯದಲ್ಲಿ ಚುನಾವಣೆ ಎದುರಿಸುವವರ ವಿಶ್ವಾಸವನ್ನೇ ಕಸಿದಿದೆ.

ಮಾಜಿ ಶಾಸಕ ಎಂ.ಆರ್​.ಸೀತಾರಾಂ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಎಂ.ಡಿ.ಲಕ್ಷಿ$್ಮನಾರಾಯಣ ಕೂಡ ಕಾಂಗ್ರೆಸ್​ ತೊರೆಯುವ ಚಿಂತನೆಯಲ್ಲಿದ್ದು ಬಿಜೆಪಿ ರಾಜ್ಯಾಧ್ಯಕ್ಷರ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಒಕ್ಕಲಿಗ ಸಮುದಾಯದ ಎಸ್​.ಪಿ.ಮುದ್ದಹನುಮೇಗೌಡ ಕಾಂಗ್ರೆಸ್​ ತೊರೆಯುವುದು ಖಚಿತವಾಗಿರುವ ನಡುವೆಯೇ ನೇಕಾರ ಸಮುದಾಯದ ಎಂ.ಡಿ.ಲಕ್ಷಿ$್ಮನಾರಾಯಣ ಕೂಡ ಪಕ್ಷ ಬಿಡುತ್ತಾರೆ ಎಂಬ ವಿಷಯ ಭವಿಷ್ಯದಲ್ಲಿ ನಿಜವಾದರೆ ಕಾಂಗ್ರೆಸ್​ಗೆ ಜಿಲ್ಲೆಯ ಮಟ್ಟಿಗೆ ದೊಡ್ಡ ನಷ್ಟವಾಗಲಿದೆ.

ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಇತ್ತೀಚೆಗೆ ಆಯೋಜಿಸಿದ್ದ ನವಸಂಕಲ್ಪ ಚಿಂತನಾ ಶಿಬಿರ ಕಾಯಕರ್ತರಲ್ಲಿ ಉತ್ಸಾಹ ಮೂಡಿಸುವಲ್ಲಿ ವಿಫಲವಾಗಿದ್ದು, ಮುಖಂಡರ ನಡುವಿನ ಮುನಿಸು ಪ್ರದರ್ಶನಕ್ಕಷ್ಟೇ ವೇದಿಕೆಯಾಗಿತ್ತು ಎನಿಸಿದೆ. ಜತೆಗೆ ಜಿಲ್ಲೆಯಲ್ಲಿ ಸರ್ವಸಮ್ಮತ ಜಿಲ್ಲಾಧ್ಯಕ್ಷರ ನೇಮಕ ಕೂಡ ಕಾಂಗ್ರೆಸ್​ಗೆ ಸಾಧ್ಯವಾಗುತ್ತಿಲ್ಲ.

ಶಿಬಿರಕ್ಕೂ ಅವರೇ, ಚುನಾವಣೆಗೂ ಅವರೇ ಸಾರಥ್ಯ!: ಎಐಸಿಸಿ, ಕೆಪಿಸಿಸಿ ಶಿಬಿರಗಳಲ್ಲಿ ನಡೆದಂತೆ ಜಿಲ್ಲಾಮಟ್ಟದ ಶಿಬಿರದಲ್ಲಿಯೂ ಸಾಮಾಜಿಕ ನ್ಯಾಯ, ಸಬಲೀಕರಣ ಸಮಿತಿ (ಎಚ್​.ವಿ.ವೆಂಕಟೇಶ್​), ಸಂಟನಾ ಸಮಿತಿ (ಡಾ.ಎಚ್​.ಡಿ.ರಂಗನಾಥ್​), ಯುವ, ಮಹಿಳೆ, ಶಿಕ್ಷಣ ಹಾಗೂ ಉದ್ಯೋಗ ಸಮಿತಿ (ಬೆಮೆಲ್​ ಕಾಂತರಾಜು), ರಾಜಕೀಯ ವ್ಯವಹಾರ (ಡಾ.ರಫೀಕ್​ಅಹ್ಮದ್​), ಕೃಷಿ ಹಾಗೂ ನೀರಾವರಿ ಸಮಿತಿಗಳಿಗೆ ಟಿ.ಬಿ.ಜಯಚಂದ್ರ ಹಾಗೂ ಕೆ.ಷಡಕ್ಷರಿ ನೇತೃತ್ವದಲ್ಲಿ ಸಭೆ ನಡೆದಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವವರೂ ಅವರೇ, ಶಿಬಿರದಲ್ಲಿ ಸಂಟನೆಯ ಬಗ್ಗೆ ತಿಳಿಸುವವರೂ ಅವರೇ ಆಗಿದ್ದು ಹೊಸತನಕ್ಕೆ ಅವಕಾಶವಿಲ್ಲದಂತಾಗಿದೆ. ಎಸ್​ಸ್ಸಿಗೆ ಮೀಸಲಾಗಿರುವ ನೆಲಮಂಗಲ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಡಾ.ಜಿ.ಪರಮೇಶ್ವರ ಇತ್ತೀಚೆಗಷ್ಟೇ ಕಾಂಗ್ರೆಸ್​ಗೆ ಬಂದಿರುವ ಬೆಮೆಲ್​ ಕಾಂತರಾಜುಗೆ ವೇದಿಕೆಗಳಲ್ಲಿ ವಿಶೇಷ ಮನ್ನಣೆ ನೀಡುತ್ತಿದ್ದಾರೆ ಎಂಬ ಮುನಿಸು ಕೂಡ ಕಾಂಗ್ರೆಸ್​ ಪಾಳಯದಲ್ಲಿ ಶುರುವಾಗಿದೆ.

ಎಸ್​ಪಿಎಂಗೆ ಬಿಜೆಪಿ ಗಾಳ ಬಹುತೇಕ ಸಕ್ಸಸ್​ ?: ನವ ಸಂಕಲ್ಪ ಶಿಬಿರದಿಂದಲೂ ದೂರಉಳಿದ ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ ಕಾಂಗ್ರೆಸ್​ನಿಂದ ದೂರವಾಗಿರುವುದನ್ನು ಮತ್ತೊಮ್ಮೆ ದೃಢವಾಗಿಸಿದ್ದಾರೆ. ಸಂಸತ್​ ಚುನಾವಣೆ ದೃಷ್ಟಿಯಿಂದ ಅವರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂಬ ಗುಸುಗುಸು ಜಿಲ್ಲಾ ರಾಜಕೀಯದಲ್ಲಿ ಕೇಳಿಬರುತ್ತಿದೆ.

ಜಿಲ್ಲೆಯ ಕಾಂಗ್ರೆಸ್​ ಮುಖಂಡರೂ ಎಸ್​ಪಿಎಂ ಅವರನ್ನು ಉಳಿಸಿಕೊಳ್ಳುವ ಸಣ್ಣ ಪ್ರಯತ್ನ ಕೂಡ ಮಾಡದಿರುವುದು ಬಿಜೆಪಿಗೆ ದೊಡ್ಡ ಲಾಭ ತರುವ ಸಾಧ್ಯತೆಯಿದೆ. ಸಂಸತ್​ ಚುನಾವಣೆಗೂ ಮುಂಚೆ ಬರುವ ಕುಣಿಗಲ್​ ವಿಧಾನಸಭಾ ಕ್ಷೇತ್ರದ ಟಿಕೆಟ್​ಗೆ ಪಟ್ಟು ಹಿಡಿದಿರುವ ಮುದ್ದಹನುಮೇಗೌಡ ಜತೆ ದೆಹಲಿ ಮಟ್ಟದ ಬಿಜೆಪಿ ಮುಖಂಡರೇ ಮಾತನಾಡಿದ್ದು, ಜಿಲ್ಲೆಯ ಪ್ರಭಾವಿ ಒಕ್ಕಲಿಗ ಸಮುದಾಯದ ಮುಖಂಡ ಕಮಲ ಪಾಳಯದಲ್ಲಿ ಕಾಣಿಸಿಕೊಳ್ಳುವ ಸಮಯ ದೂರವಿಲ್ಲ ಎಂಬ ಮಾತಿದೆ.