ತುಮಕೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸದ ಮುಂದೆ ದಾಂಧಲೆ ನಡೆಸಿ ಬಂಧನಕ್ಕೊಳಗಾಗಿದ್ದ ಎನ್ಎಸ್ಯುಐ ಕಾರ್ಯಕರ್ತರನ್ನು ಭೇಟಿ ಮಾಡಲು ಬುಧವಾರವೂ ಕಾಂಗ್ರೆಸ್ ನಾಯಕರ ದಂಡು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಆಗಮಿಸಿತ್ತು.
ಬುಧವಾರ ಬೆಳಗ್ಗೆ ಕಾರಾಗೃಹಕ್ಕೆ ತೆರಳಿ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಅಂಬೇಡ್ಕರ್, ಬಸವಣ್ಣನವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ವಿಚಾರ ತಿರುಚಲಾಗಿದೆ. ಹಾಗಾಗಿ, ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಹೋರಾಟ ನಮ್ಮ ಹಕ್ಕು. ಆದರೆ, ಮನೆಯೊಳಗೆ ನುಗ್ಗಿದರು, ಬೆಂಕಿ ಹಚ್ಚಿದರು ಎಂದು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡುವ ಕೆಲಸ ಸರ್ಕಾರ ಮಾಡಬಾರದು. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅಲ್ಲ ಎನ್ನುತ್ತಾರೆ. ಬಸವಣ್ಣನವರ ಬಗ್ಗೆ ಬೇರೆ ರೀತಿ ಬರೆದರೆ ಪ್ರತಿರೋಧ ಬಂದೇ ಬರುತ್ತದೆ. ಇಂತಹ ಎಡವಟ್ಟುಗಳನ್ನು ಪ್ರಶ್ನಿಸುವ ಸ್ವಾತಂತ್ರವೂ ಇಲ್ಲದಾಗಿದೆ. ತಪ್ಪುಗಳನ್ನು ಖಂಡಿಸುವಂತೆಯೂ ಇಲ್ಲ ಎಂದು ಹರಿಹಾಯ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮುರಳೀಧರ ಹಾಲಪ್ಪ, ಜಿ.ಚಂದ್ರಶೇಖರಗೌಡ, ದಿನೇಶ್ ಮತ್ತಿತರರು ಹಾಜರಿದ್ದರು.
ಗೃಹಸಚಿವರನ್ನೇ ಜೈಲಿಗೆ ಕಳಿಸುತ್ತೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆರೋಪಿಸಿದರು. ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಎನ್ಎಸ್ಯುಐ ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಕಾನೂನುಬಾಹಿರವಾಗಿ ಬಂಧಿಸಿದ್ದು, ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಕಠಿಣ ಸೆಕ್ಷನ್ಗಳನ್ನು ಹಾಕಿ ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಿದ್ದಾರೆ. ಗೃಹಸಚಿವರು ಏನೇ ಮಾಡಿದರೂ ಮುಂದಿನ ಆರು ತಿಂಗಳೊಳಗೆ ಮಾತ್ರ ಮಾಡಬಹುದು. ಆ ನಂತರ ಗೃಹಸಚಿವರನ್ನೂ ನಾವು ಜೈಲಿಗೆ ಕಳುಹಿಸುವುದು ಸತ್ಯ ಎಂದು ಕಿಡಿಕಾರಿದರು.
ಭಾರತದ ಮಾನ ಹರಾಜು: ಪ್ರವಾದಿ ಮಹಮ್ಮದ್ ವಿರುದ್ಧ ಹೇಳಿಕೆ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸುವ ಮುನ್ನ ಕೇಂದ್ರ ಬಿಜೆಪಿ ಸರ್ಕಾರವು ಸ್ಪಷ್ಟನೆ ಕೊಡಬೇಕಿತ್ತು. ಈಗ ಆ ಹೇಳಿಕೆಯಿಂದ ನಾವು ದೂರ ಇದ್ದೇವೆ ಎನ್ನುತ್ತಾರೆ. ಇವತ್ತು ಭಾರತದ ಮಾನ ಹರಾಜು ಹಾಕುವ ಸ್ಥಿತಿಗೆ ಬಂದಿದೆ. ಹೊರದೇಶದಿಂದ ಎಚ್ಚರಿಕೆಗಳು ಬರುತ್ತಿವೆ. ಅಲ್ ಖೈದಾದವರು ನಾವು ಮುಂಬೈನಲ್ಲಿ ಮತ್ತೆ ನಮ್ಮ ಚಟುವಟಿಕೆ ಶುರು ಮಾಡುತ್ತೇವೆ ಎಂಬ ಹಂತಕ್ಕೆ ತಲುಪಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಕಾರಣ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದ್ದು ಮೆ ಕೇಳಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ ಒತ್ತಾಯಿಸಿದರು.