ಜಿಲ್ಲೆ

ಕೈ ಕಿರುಕುಳದಿಂದ ಅಂಬೇಡ್ಕರ್ ಮೃತಪಟ್ಟರು!

ಬೆಳಗಾವಿ: ದೇಶದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಂವಿಧಾನ ರಚಿಸಿಕೊಟ್ಟ ಡಾ.ಬಿ.ಆರ್. ಅಂಬೇಡ್ಕರ್ ಅವರು ಜವಾಹರಲಾಲ್ ನೆಹರು, ಗಾಂಧೀಜಿ ಕಿರುಕುಳದಿಂದ ಹತ್ತು ವರ್ಷ ಬೇಗ ಮಹಾಪರಿನಿರ್ವಾಣ ಹೊಂದಿದರು ಎಂದು ರಾಜ್ಯ ಬಿಜೆಪಿ ಎಸ್‌ಸಿ, ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಅಂಬರಯ್ಯ ಅಷ್ಟಗಿ ಆರೋಪಿಸಿದರು.

ನಗರದ ಹಳೇ ಪಿಬಿ ರಸ್ತೆಯಲ್ಲಿರುವ ಸಾಮರ್ಥ್ಯ ಭವನದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ‘ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ!’ ಎಂಬ ವಿಷಯದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಅವತ್ತಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಡಾ.ಬಿ.ಆರ್.ಅಂಬೇಡ್ಕರ್ ಚುನಾವಣೆಯಲ್ಲಿ ಸೋಲುವಂತೆ ಮಾಡಿದರು. ಬಳಿಕ ಮಹಾಪರಿನಿರ್ವಾಣ ಹೊಂದಿದ ನಂತರ ದೆಹಲಿಯಲ್ಲಿ ಅಂತ್ಯ ಸಂಸ್ಕಾರ ನೆರವೇರದಂತೆ ಮಾಡಿದರು. ಸ್ಮಾರಕ ನಿರ್ಮಾಣಕ್ಕೂ ಅವಕಾಶ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅವತ್ತೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ, ಎಸ್‌ಸಿ, ಎಸ್‌ಟಿ ಸಮುದಾಯ ಕಾಂಗ್ರೆಸ್ ಬೆನ್ನು ಹತ್ತಿರುವುದು ನಾಚೀಗೇಡಿನ ಸಂಗತಿ. ನಮ್ಮನ್ನು ಅವಮಾನಿಸುತ್ತಿರುವ ಕಾಂಗ್ರೆಸ್ ಜತೆಗೆ ನಾವೆಲ್ಲಾ ಏಕೆ ಹೋಗಬೇಕು.?

ಕಾಂಗ್ರೆಸ್‌ನಿಂದ ಎಸ್‌ಸಿ, ಎಸ್‌ಟಿ ಸಮುದಾಯ ಉದ್ದಾರ ಆಗಿಲ್ಲ. ಕೆಲ ಕುಟುಂಬಗಳು ಉದ್ದಾರ ಆಗಿವೆ ಎಂದು ಟೀಕಿಸಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದಲ್ಲಿರುವ ಎಲ್ಲ ಜಾತಿ ವರ್ಗಗಳಲ್ಲಿನ ನಾಗರಿಕರ ಸಮಾನತೆಗಾಗಿ ಸಂವಿಧಾನ ರಚಿಸಿದ್ದಾರೆ.

ಕೇವಲ ಒಂದು ಜಾತಿಗಾಗಿ ಸಂವಿಧಾನ ರಚನೆ ಮಾಡಿಲ್ಲ. ಆದರೆ, ಕಾಂಗ್ರೆಸ್ ನಾಯಕರು ಅಧಿಕಾರ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಇಂತಹ ಕಾಂಗ್ರೆಸ್ ವಿರುದ್ಧ ಎಸ್‌ಸಿ, ಎಸ್‌ಟಿ ಸಮುದಾಯದ ಜನರು ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಹೇಳಿದರು. ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಬಿಜೆಪಿ ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಗವಿಸಿದ್ದಪ್ಪ ದ್ಯಾಮನ್ನವರ, ಹನುಮಂತ ಕೊಂಗಾಲಿ, ಗೀರೀಶ ದೊಂಗಡಿ, ಆನಂದ ಚೌವಾಣ ಇತರರಿದ್ದರು.