ಜಿಲ್ಲೆ

ಕೇಸರಿ ಪಡೆಗೆ ಖಂಡ್ರೆ ರೀ ಎಂಟ್ರಿ

ಬಸವಕಲ್ಯಾಣ: ಭಾಲ್ಕಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತೆ ಬಿಜೆಪಿ ಸೇರ್ಪಡೆಯಾಗುವ ಮೂಲಕ ಮರಳಿ ಗೂಡು ಸೇರಿದ್ದಾರೆ. ಭಾನುವಾರ ನಗರದಲ್ಲಿ ವಿಧಾನಸಭೆ ಉಪ ಚುನಾವಣೆ ನಿಮಿತ್ತ ಏರ್ಪಡಿಸಿದ್ದ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಅರುಣಸಿಂಗ್ ಸಮ್ಮುಖ ಖಂಡ್ರೆ ಕೇಸರಿ ಪಡೆಗೆ ರೀ ಎಂಟ್ರಿ ಹೊಡೆದರು.

2018ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ತ್ಯಜಿಸಿ ಜೆಡಿಎಸ್ ಮತ್ತು ಇತರ ಪಕ್ಷಕ್ಕೆ ತೆರಳಿದ್ದ ಹಲವು ಮುಖಂಡರು, ಪದಾಧಿಕಾರಿಗಳ ಜತೆ ಖಂಡ್ರೆ ಬಿಜೆಪಿಗೆ ಜೈ ಎಂದರು. ಇದರೊಂದಿಗೆ ಭಾಲ್ಕಿಯಲ್ಲಿ ಜೆಡಿಎಸ್ ಸಂಪೂರ್ಣ ಝಳಝಳ ಆದಂತಾಗಿದೆ. ಅರುಣಸಿಂಗ್ ಪಕ್ಷದ ಧ್ವಜ ನೀಡಿ ಖಂಡ್ರೆ ಅವರನ್ನು ಬರಮಾಡಿಕೊಂಡರು.

ಈ ವೇಳೆ ಅರುಣಸಿಂಗ್ ಮಾತನಾಡಿ, ಎಲ್ಲೆಡೆ ಬಿಜೆಪಿ ಪರ ಅಲೆಯಿದೆ. ಬಸವಕಲ್ಯಾಣ ಸೇರಿ ರಾಜ್ಯದ ಎಲ್ಲ ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಲಿದ್ದಾರೆ. ಮಾಜಿ ಶಾಸಕರಾದ ಎಂ.ಜಿ.ಮುಳೆ, ಪ್ರಕಾಶ ಖಂಡ್ರೆ ಸೇರ್ಪಡೆ ನಮ್ಮ ಬಲ ಹೆಚ್ಚಿಸಿದೆ ಎಂದು ಹೇಳಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಖಂಡ್ರೆ ಹಾಗೂ ನಾನು ಜತೆಯಲ್ಲಿ ಶಾಸಕರಾಗಿದ್ದೇವು. ವಿಧಾನಸಭೆಯಲ್ಲಿ ಮೊದಲ ಬಾರಿ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಸರ್ಕಾರದಿಂದ ಆಚರಿಸುವಂತೆ ಧ್ವನಿ ಎತ್ತಿದ್ದರು. ನಾನು ಸಿಎಂ ಆದ ಬಳಿಕ ಶಾಸಕೀಯವಾಗಿ ಶಿವಾಜಿ ಜಯಂತಿ ಮಾಡಲಾಯಿತು. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ ಎಂದರು.

ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ವಿ.ಸೋಮಣ್ಣ, ಬಿ.ಸಿ. ಪಾಟೀಲ್, ಮುರುಗೇಶ ನಿರಾಣಿ, ಶಿವರಾಮ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್, ಸಂಸದ ಭಗವಂತ ಖೂಬಾ, ಎಂಎಲ್ಸಿ ಬಿ.ಜಿ. ಪಾಟೀಲ್, ಪ್ರಮುಖರಾದ ಡಾ.ಶೈಲೇಂದ್ರ ಬೆಲ್ದಾಳೆ, ಬಾಬು ವಾಲಿ ಇತರರಿದ್ದರು.

ಹಲವರ ಸೇರ್ಪಡೆ
ಭಾಲ್ಕಿ ತಾಲೂಕು ಜೆಡಿಎಸ್ ಅಧ್ಯಕ್ಷ ಗೋವಿಂದರಾವ ಬಿರಾದಾರ, ಜಿಪಂ ಮಾಜಿ ಅಧ್ಯಕ್ಷ ಸುಭಾಷ ಪಾಟೀಲ್, ಮಾಜಿ ಉಪಾಧ್ಯಕ್ಷ ತಾನಾಜಿ ರಾಠೋಡ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಚಪ್ಪ ಪಾಟೀಲ್, ಜಿಪಂ ಮಾಜಿ ಸದಸ್ಯರಾದ ಯಾದವರಾವ ಕನಸೆ, ನಾಗನಾಥ ಬಗದೂರೆ, ಮಲ್ಲಿಕಾರ್ಜುನ ನಾಗರಾಳೆ, ರವಿ ಕಣಜೆ, ವೆಂಕಟ ಬಿರಾದಾರ, ಭಾಲ್ಕಿ ಪುರಸಭೆ ಮಾಜಿ ಅಧ್ಯಕ್ಷ ಕೈಲಾಸನಾಥ ಮೀನಕೆರೆ ಸೇರಿ ಹಲವು ಪ್ರಮುಖರು ಪ್ರಕಾಶ ಖಂಡ್ರೆ ಜತೆ ಬಿಜೆಪಿ ಸೇರಿದರು.

ಈ ಭಾಗದಲ್ಲಿ ಬಿಜೆಪಿ ಬೆಳೆಸಿದವರಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಸಹ ಒಬ್ಬರು. ಕಾರಣಾಂತರಕ್ಕೆ ಪಕ್ಷ ಬಿಟ್ಟಿದ್ದ ಅವರು ಮತ್ತೆ ಮರಳಿ ಸೇರಿದ್ದು ಸಂತಸ ತಂದಿದೆ. ಮಾಜಿ ಶಾಸಕ ಎಂ.ಜಿ. ಮುಳೆ ನಂತರ ಈಗ ಖಂಡ್ರೆ ಸೇರ್ಪಡೆ ಪಕ್ಷಕ್ಕೆ ಹೆಚ್ಚು ಶಕ್ತಿ ತಂದಿದ್ದು, ಬಸವಕಲ್ಯಾಣದಲ್ಲಿ ನಮ್ಮ ಗೆಲುವು ಶತಸಿದ್ಧ.| ಅರುಣಸಿಂಗ್, ಬಿಜೆಪಿ ರಾಜ್ಯ ಉಸ್ತುವಾರಿ
ಉತ್ತಮ ಸಮಾಜ ಹಾಗೂ ರಾಷ್ಟ್ರ ಕಟ್ಟುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿಯಿಂದಲೇ ನಾನು ರಾಜಕೀಯ ಆರಂಭಿಸಿದ್ದು, ಇನ್ಮುಂದೆ ಇದರಲ್ಲೇ ಅಂತ್ಯಗೊಳ್ಳಲಿದೆ. ಬೇಷರತ್ತಾಗಿ ಪಕ್ಷ ಸೇರಿದ್ದೇನೆ. ವರಿಷ್ಠರು ನೀಡುವ ಜವಾಬ್ದಾರಿ ನಿರ್ವಹಿಸುವ ಜತೆಗೆ ಭಾಲ್ಕಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಹಗಲಿರುಳು ದುಡಿಯುವೆ.| ಪ್ರಕಾಶ ಖಂಡ್ರೆ, ಮಾಜಿ ಶಾಸಕ