ಹುಬ್ಬಳ್ಳಿ: ಕರೊನಾ ಪಾಸಿಟಿವ್ ಪತ್ತೆಯಾಗಿರುವ ನಗರದ ಕೇಶ್ವಾಪುರ ವಿನಯ ಕಾಲನಿಯ ವ್ಯಕ್ತಿಯ ಮನೆ ಸುತ್ತಲಿನ 100 ಮೀಟರ್ ಪ್ರದೇಶವನ್ನು ಗುರುವಾರ ಸೀಲ್ಡೌನ್ ಮಾಡಲಾಗಿದೆ.
ಮಹಾರಾಷ್ಟ್ರದಿಂದ ಬಂದಿದ್ದ ವಿನಯ ಕಾಲನಿಯ ವ್ಯಕ್ತಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿತ್ತು. ನಂತರ ಆತನ ಮನೆಯ ಮೇಲ್ಭಾಗದಲ್ಲಿ ಬಾಡಿಗೆಗೆ ಇರುವ ಮತ್ತೊಬ್ಬ ವ್ಯಕ್ತಿಯಲ್ಲೂ ಸೋಂಕು ಇರುವುದು ಪತ್ತೆಯಾಗಿದೆ.
ಇದೀಗ ಆ ಮನೆ ಸುತ್ತಲಿನ 100 ಮೀ. ಪ್ರದೇಶವನ್ನು ಸಂಪೂರ್ಣ ಸೀಲ್ಡೌನ್ ಮಾಡಿದ್ದು, ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ.
ಸೋಂಕು ಪಾಸಿಟಿವ್ ಇರುವ ವ್ಯಕ್ತಿಗಳ ಮನೆಗೆ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಅಕ್ಕಪಕ್ಕದ ಮನೆಯವರಿಗೂ ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರಿಂದ ಅಲ್ಲಿನ ನಿವಾಸಿಗಳು ಪರೀಕ್ಷೆಗಾಗಿ ಕಿಮ್ಸ್ಗೆ ತೆರಳಿದರು.
ಗುರುವಾರ ಮಧ್ಯಾಹ್ನ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸುತ್ತಲಿನ ಮನೆಗಳಲ್ಲಿ ಸರ್ವೆ ಕಾರ್ಯ ನಡೆಸಿದರು. ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮನೆ ಮಾಲೀಕ ಚಿಕಿತ್ಸೆಗಾಗಿ ಮಹಾರಾಷ್ಟ್ರಕ್ಕೆ ತೆರಳಿ ವಾಪಸಾಗಿದ್ದನು. ಆತ ಬರುತ್ತಿದ್ದಂತೆ ಬಾಡಿಗೆದಾರನು ಕಾಂಪೌಂಡ್ ಬಾಗಿಲು ತೆಗೆದು, ಲಗೇಜನ್ನು ಒಳಗೆ ತರಲು ಸಹಕರಿಸಿದ್ದನು ಎನ್ನಲಾಗಿದೆ. ಆ ಸಂದರ್ಭದಲ್ಲೇ ವೈರಸ್ ಹಬ್ಬಿತೆ ಎಂಬ ಅನುಮಾನ ಉಂಟಾಗಿದೆ.
1,433 ಕೋವಿಡ್ ವರದಿ ಬಾಕಿ: ಧಾರವಾಡ ಜಿಲ್ಲೆಯಲ್ಲಿ ಗುರುವಾರ ಸಂಜೆ ವೇಳೆಗೆ 1,433 ಜನರ ಕೋವಿಡ್ ವರದಿ ಬರುವುದು ಬಾಕಿ ಇದೆ.
ಈವರೆಗೆ ಜಿಲ್ಲೆಯಲ್ಲಿ 17,317 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 15,861 ಜನರ ವರದಿ ನೆಗೆಟಿವ್ ಬಂದಿವೆ. 51 ಪ್ರಕರಣಗಳು ಪಾಸಿಟಿವ್ ಬಂದಿದ್ದು, 23 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 28 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶ ಹಾಗೂ ಹೊರರಾಜ್ಯಗಳಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 18,173 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 5,483 ಜನರು ಮನೆಯಲ್ಲೇ ಪ್ರತ್ಯೇಕವಾಗಿ 14 ದಿನ ವಾಸವಾಗಿದ್ದಾರೆ. ಕಿಮ್್ಸ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ಗಳಲ್ಲಿ 26 ಜನ ದಾಖಲಾಗಿದ್ದಾರೆ. 7,081 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 5,583 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಮತ್ತೊಬ್ಬನಿಗೆ ಗುಣ: ಕರೊನಾ ಸೋಂಕು ಗೆದ್ದಿರುವ ಒಬ್ಬರನ್ನು ಗುರುವಾರ ಹುಬ್ಬಳ್ಳಿಯ ಕಿಮ್ಸ್ನಿಂದ ಬಿಡುಗಡೆ ಮಾಡಲಾಗಿದೆ. ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಧಾರವಾಡ ನವಲೂರ ಪಠಾಣಗಲ್ಲಿ ನಿವಾಸಿ 26 ವರ್ಷದ ಪುರುಷನಿಗೆ ಸಂಪೂರ್ಣ ಗುಣವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 28 ಜನರು ಕೋವಿಡ್ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.