ಜಿಲ್ಲೆ

ಕೇರಳದ ಮಲಪ್ಪುರಂ ಅಮಿಗೋಸ್ ಚಾಂಪಿಯನ್

ಸುಂಟಿಕೊಪ್ಪ: ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಸುಂಟಿಕೊಪ್ಪದ ಬ್ಲೂ ಬಾಯ್ಸ ಯೂತ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ 25ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕೇರಳದ ಮಲಪ್ಪುರಂ ಅಮಿಗೋಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸುಂಟಿಕೊಪ್ಪದ ಮಿಡ್‌ಸಿಟಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು. ರೋಚಕ ಹಣಾಹಣಿಗೆ ಸಾಕ್ಷಿಯಾದ ಫೈನಲ್ ಪಂದ್ಯದ ಮೊದಲಾರ್ಧದ ಎರಡೂ ತಂಡಗಳಿಂದ ಆರಂಭದಲ್ಲಿ ಒಂದು ಗೋಲು ಕೂಡ ದಾಖಲಾಗಿರಲಿಲ್ಲ. ಇನ್ನೇನು ಮೊದಲಾರ್ಧ ಮುಗಿಯುತ್ತಿದೆ ಎನ್ನುವಾಗ 20ನೇ ನಿಮಿಷದಲ್ಲಿ ಅಮಿಗೋಸ್ ತಂಡದ ಅಮ್ದಾದ್ ಮೊದಲ ಗೋಲು ಹೊಡೆದು ಮುನ್ನಡೆ ತಂದುಕೊಟ್ಟರು.

ದ್ವಿತೀಯಾರ್ದದಲ್ಲಿ ಮಿಡ್ ಸಿಟಿ ತಂಡದ ಆಟಗಾರರು ಅಕ್ರಮಣಕಾರಿ ಆಟಕ್ಕೆ ಇಳಿದರು. 10ನೇ ನಿಮಿಷದಲ್ಲಿ ತನ್ವಿರ್ (ಚಿನ್ನು) ಗೋಲು ದಾಖಲಿಸಿ ಪಂದ್ಯದಲ್ಲಿ ಸಮಬಲ ಸಾಧಿಸಲು ನೆರವಾದರು. ಈ ಮೂಲಕ ಪಂದ್ಯ ಮತ್ತಷ್ಟು ರೋಚಕ ತಿರುವು ಪಡೆದು ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಆದರೆ ನಿಗದಿತ ಅವಧಿಯಲ್ಲಿ ಇತ್ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿದ ಕಾರಣ ಟೈ ಬ್ರೇಕರ್ ಮೊರೆ ಹೋಗಲಾಯಿತು. ಟೈಬ್ರೇಕರ್‌ನಲ್ಲಿ ಏಕಸ್ವಾಮ್ಯ ಸಾಧಿಸಿದ ಮಲಪ್ಪುರಂನ ಅಮಿಗೋಸ್ ತಂಡ 4-1 ಗೋಲುಗಳಿಂದ ಗೆಲುವು ಸಾಧಿಸಿತು.

ಸುಂಟಿಕೊಪ್ಪ ಮಿಡ್‌ಸಿಟಿ ತಂಡದ ಪಾಂಡ್ಯನ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರ ಗೌರವಕ್ಕೆ ಪಾತ್ರರಾದರು. ಫೈನಲ್ ಪಂದ್ಯದಲ್ಲಿ ಮೊದಲ ಗೋಲು ದಾಖಲಿಸಿದ ಮಲಪ್ಪುರಂ ಅಮಿಗೋಸ್ ತಂಡದ ಅಮ್ದಾದ್ ವಿಶೇಷ ಪ್ರಶಸ್ತಿ ಪಡೆದುಕೊಂಡರು. ಗೆಲುವು ಸಾಧಿಸಿದ ತಂಡಕ್ಕೆ 1 ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿ ಮತ್ತು ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿಯನ್ನು ಗಣ್ಯರು ಪ್ರದಾನ ಮಾಡಿದರು. ತೀರ್ಪುಗಾರರಾಗಿ ಕರಣ್, ಗಿರೀಶ್ ಹಾಗೂ ಜಾನ್ಸನ್ ಕಾರ್ಯನಿರ್ವಹಿಸಿದರು.

ಬ್ಲೂಬಾಯ್ಸ್ ಯೂತ್ ಕ್ಲಬ್ ಸ್ಥಾಪಕಾಧ್ಯಕ್ಷ ಜರ್ಮಿ ಡಿಸೋಜಾ, ಹಾಲಿ ಅಧ್ಯಕ್ಷ ಆಲಿಕುಟ್ಟಿ, ಸಂಚಾಲಕ ಪ್ರಸನ್ನ, ಹಿರಿಯ ಆಟಗಾರರಾದ ಎನ್.ಎಸ್.ಕಾಳಪ್ಪ, ಸೋಮಣ್ಣ, ಪ್ಯಾಟ್ರಿಕ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಸುಂಟಿಕೊಪ್ಪ ಪಿಡಿಒ ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.

ನಟಿ ಶುಭ್ರ ಅಯ್ಯಪ್ಪ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ಶಿವಪ್ಪ, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ, ಪನ್ಯತೋಟದ ಮಾಲೀಕರಾದ ಆನಂದ್ ಬಸಪ್ಪ, ಜಿ.ಪಂ ಮಾಜಿ ಸದಸ್ಯ ಪಿ.ಎಂ. ಲತೀಫ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಸುಂಟಿಕೊಪ್ಪ ಪಿಡಿಒ ವೇಣುಗೋಪಾಲ್, ಜಿಲ್ಲಾಡಳಿತ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಬ್ಲೂ ಬಾಯ್ಸ್ ಯುವಕ ಸಂಘದ ಅಧ್ಯಕ್ಷ ಆಲಿಕುಟ್ಟಿ ಸ್ಥಾಪಕಾಧ್ಯಕ್ಷ ಜರ್ಮಿ ಡಿಸೋಜಾ, ಉದ್ಯಮಿ ಪ್ರಶಾಂತ ವೆಂಕಟರಮಣ, ಪ್ರಮುಖರಾದ ಎಂ.ಎ. ಉಸ್ಮಾನ್, ಪಂದ್ಯಾವಳಿ ಸಂಘಟಕ ವಿನೋದ್ ಶಿವಪ್ಪ ಇತರರಿದ್ದರು.


ಅಭಿಮಾನಿಗಳ ಹರ್ಷೋದ್ಗಾರ
ಮೋಡಕವಿದ ವಾತಾವರಣ ಹಾಗೂ ತುಂತುರು ಮಳೆ ಹನಿ ಮಧ್ಯೆ ಆರಂಭವಾದ ಅಂತಿಮ ಪಂದ್ಯದ ಕೊನೆಯ ತನಕವೂ ಜಿಎಂಪಿ ಶಾಲಾ ಮೈದಾನ ಫುಟ್‌ಬಾಲ್ ಪ್ರೇಮಿಗಳಿಂದ ತುಂಬಿತ್ತು. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದ ಕಾರಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಶಿಳ್ಳೆ ಹೊಡೆದು, ಚಪ್ಪಾಳೆ ಹಾಕಿ ತಮ್ಮ ಮೆಚ್ಚಿನ ಆಟಗಾರರನ್ನು ಹುರಿದುಂಬಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗೋಲುಗಳು ಹೊಡೆದಾಗ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ ದೃಶ್ಯವೂ ಕಂಡು ಬಂತು. ‘ಕೊಡಗಿನ ಕೋಲ್ಕತ್ತ’ ಹೆಗ್ಗಳಿಕೆಯ ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಅಭಿಮಾನ ಕಂಡು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಆಶ್ಚರ್ಯಚಕಿತರಾದರು.
=-=-=-=-=-=-=-=-=-=-=-=-=-=-=-=-=-=-=-=-=-=-