ಗೋಣಿಕೊಪ್ಪ: ಕಾವೇರಿ ಕಲಾ ವೇದಿಕೆಯಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಗೋಣಿಕೊಪ್ಪ ದಸರಾ ಕಾರ್ಯಕ್ರಮದಲ್ಲಿ ಕೇರಳ ಶೈಲಿಯ ಹಾಡು, ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮ ಗಮನ ಸೆಳೆಯಿತು.
ಕೇರಳದ ಜಾನಪದ ಸಂಸ್ಕೃತಿಯನ್ನು ಪ್ರೇಕ್ಷಕರಿಗೆ ಉಣಬಡಿಸಲಾಯಿತು. ಮಲಯಾಳಿ ಭಾಷಿಗರು ಮತ್ತು ಕಲಾಭಿಮಾನಿಗಳು ಸಂತಸ ಪಟ್ಟರು. ಭರತನಾಟ್ಯ, ಪೊನ್ನಾಡು ಪುಲಿಗ ತಂಡ ಜಾನಪದ ಹಾಡುಗಳು ಕಾರ್ಯಕ್ರಮದ ಆಕರ್ಷಣೆಯನ್ನು ಹೆಚ್ಚಿಸಿತು. ಸುಮಾರು 15 ಕ್ಕೂ ಹೆಚ್ಚು ಹಾಡು ಮತ್ತು ನೃತ್ಯಗಳ ಮೂಲಕ ಸಾಂಸ್ಕೃತಿಕ ಸಂಭ್ರಮನ್ನು ಪ್ರೇಕ್ಷಕರಲ್ಲಿ ಬಿತ್ತಿದರು. ಚಂಡೆಮದ್ದಳೆಯ ಶಬ್ದ ಹಿರಿಯರು, ಕಿರಿಯರನ್ನು ಹುಚ್ಚೆದ್ದು ಕುಣಿಸಿತು. ಮಹಿಷಾಸುರ ಸಂಹಾರದ ತೆರೆಗಳು ಹೆಚ್ಚು ಗಮನ ಸೆಳೆಯಿತು.
ಚಾಮುಂಡೇಶ್ವರಿ ನಾಟಕ ಕಲಾಸಂಘ ನಡೆಸಿಕೊಟ್ಟ ರಾಧೆ-ಕೃಷ್ಣ ನೃತ್ಯ ರೂಪಕ ಗಮನ ಸೆಳೆಯಿತು. ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಶಾಲೆ ಭರತನಾಟ್ಯದ ಸೊಗಡನ್ನು ನೀಡಿತು. ಕಾವೇರಿ ಕಲಾಸಿರಿ ತಂಡದ ಚಿತ್ರಗೀತೆಗಳ ಗಾಯನ ಕೇಳುಗರ ಕಿವಿಗಿಂಪು ನೀಡಿತು.
ಕಾರ್ಯಕ್ರಮವವನ್ನು ನಿಗದಿತ ಸಮಯಕ್ಕೆ ಆರಂಭಿಸದಿರುವ ಬಗ್ಗೆ ಕಲಾಭಿಮಾನಿಗಳು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮ ನೀಡಲು ಬಂದ ಕಲಾವಿದರು ಕಾದು ಸುಸ್ತಾದರು. ಹೀಗಾಗಿ, ಸಮಯ ಹೊಂದಿಸಲಾಗದೆ ಗೊಂದಲಕ್ಕೆ ಕಾರಣವಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಅನವಶ್ಯಕ ಭಾಷಣದಿಂದಾಗಿ ಸಮಯ ಪಾಲನೆಗೆ ಮುಳುವಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಬಿ.ಎನ್.ಪ್ರಕಾಶ್, ಪ್ರಮುಖರಾದ ಕೆ.ಜೆ ರಾಮಕೃಷ್ಣ, ಕೊಣಿಯಂಡ ಬೋಜಮ್ಮ ಉತ್ತಪ್ಪ, ಜಿ.ಕೆ.ಗೀತಾ, ಬಾಲಕೃಷ್ಣ ರೈ, ಕಂಜಿತಂಡ ಪ್ರವೀಣ್, ಜಮ್ಮಡ ಅರಸು, ಸಜನ್ ಚಂಗಪ್ಪ, ಮಂಜುರೈ, ಗೋವಿಂದಪ್ಪ, ಪಿ.ಜೆ.ಸಾಜಿ, ಕರ್ಣರಾಜ್, ಸೋಮಣ್ಣ ಪಾಲ್ಗೊಂಡಿದ್ದರು.