ಕುಶಾಲನಗರ: ಕುಶಾಲನಗರದ ಕೇರಳ ಸಮಾಜದ ವತಿಯಿಂದ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಭಾನುವಾರ ಸಾಮೂಹಿಕ ಓಣಂ ಆಚರಣೆ ವಿಜೃಂಭಣೆಯಿಂದ ಜರುಗಿತು.ಕುಶಾಲನಗರದ ಇಂದಿರಾ ಬಡಾವಣೆಯಲ್ಲಿರುವ ಕೇರಳ ಸಮಾಜದಿಂದ ಸಾಂಪ್ರದಾಯಿಕ ಉಡುಗೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಸಮುದಾಯದ ಬಂಧುಗಳು ಬಲಿ ಚಕ್ರವರ್ತಿ ವೇಷಧಾರಿಯನ್ನು ಕರೆತಂದರು.
ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಲೆಯಾಳಿ ಸಮುದಾಯದವರು ಕುಶಾಲನಗರದಲ್ಲಿ ಸಮಾಜವನ್ನು ಕಟ್ಟಿ ಬೆಳೆಸಿ ಪ್ರತೀ ವರ್ಷ ಓಣಂ ಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ರೂಪಗಳು ವಿಭಿನ್ನವಾದರೂ ದೇವರು ಒಬ್ಬನೇ ಎಂಬುದನ್ನು ಓಣಂ ಸಾರುತ್ತದೆ ಎಂದರು.
ಜಿಲ್ಲಾ ಹಿಂದು ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯ್ ಮಾತನಾಡಿ, ಎಲ್ಲಾ ಜಾತಿ ಧರ್ಮಗಳಿಗೆ ಸೇರಿದ ಮಲೆಯಾಳಿ ಭಾಷಿಗರು ಮತ್ತಷ್ಟು ಸಂಘಟಿತರಾಗುವ ಮೂಲಕ ಸಾಮೂಹಿಕ ಓಣಂ ಆಚರಣೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಅಚ್ಚುಕಟ್ಟಾಗಿ ನೆರವೇರಿಸಬೇಕಿದೆ ಎಂದರು.
ಕೇರಳ ಸಮಾಜದ ಅಧ್ಯಕ್ಷ ಕೆ.ಆರ್. ಶಿವಾನಂದನ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಕೆ.ಬಾಬು, ಪದಾಧಿಕಾರಿಗಳಾದ ಕೆ.ಜೆ.ರಾಬಿನ್, ಅಜಿತ ಧನರಾಜು, ಬಿ.ಸಿ.ಆನಂದ್, ಐ.ಡಿ.ರಾಯ್, ರವೀಂದ್ರನ್, ಎ.ಕೆ.ವೇಣು, ಎಂ.ಜಿ.ಪ್ರಕಾಶ್, ಬಾಲಕೃಷ್ಣನ್, ಸುಶೀಲಾ ಇತರರು ಇದ್ದರು.
ಸಮಾಜದ ಪ್ರಗತಿಗೆ ಶ್ರಮಿಸಿದ ಹಿರಿಯರಾದ ಕೆ.ಥಾಮಸ್, ಶಶಿಧರ, ರಾಮಣ್ಣ ಪೂಜಾರಿ, ಕೆ.ಆರ್. ವಿಜಯನ್, ಯು.ಎಂ.ಲಕ್ಷ್ಮಣ್ ಅವರನ್ನು ಸನ್ಮಾನಿಸಲಾಯಿತು.