ಜಿಲ್ಲೆ

ಕೇದಾರನಾಥದಲ್ಲಿ ಪಂಚಾಕ್ಷರ ಶ್ರೀ ಮೌನಾನುಷ್ಠಾನ

ಸೇಡಂ: ಲೋಕ ಕಲ್ಯಾಣಕ್ಕಾಗಿ ಉತ್ತರಖಾಂಡದ ಚಾರಧಾಮಗಳಲ್ಲಿ ಒಂದಾಗಿರುವ ಕೇದಾರನಾಥದ ಕಾಳಿ ಮಂದಿರದಲ್ಲಿ ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರ ಸ್ವಾಮಿಗಳು ಅ.3ರಿಂದ ಮೌನಾನುಷ್ಠಾನ ಕೈಗೊಳ್ಳಲಿದ್ದಾರೆ ಎಂದು ಶ್ರೀ ಮಠ ಟ್ರಸ್ಟನ ಸದಸ್ಯ ನಾಗಯ್ಯಸ್ವಾಮಿ ಬೊಮ್ನಳ್ಳಿ ಹೇಳಿದರು. ಶ್ರೀ ಪಂಚಾಕ್ಷರ ಸ್ವಾಮಿಗಳು ಜೋಳಿಗೆ ಹಾಕಿಕೊಂಡು ಹಳ್ಳಿ-ಹಳಿಗೆ ತಿರುಗಾಡಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಇಲ್ಲಿವರೆಗೂ ಏಳು ಅನುಷ್ಠಾನಗಳನ್ನು ಪೂರ್ಣಗೊಳಿಸಿದ್ದಾರೆ. ಇದೀಗ 8ನೇ ಅನುಷ್ಠಾನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥದಲ್ಲಿ ಕೈಗೊಳ್ಳುತ್ತಿರುವುದು ವಿಶೇಷ. ಸೆ.30ರಂದು ಬೆಳಗ್ಗೆ 7ಕ್ಕೆ ಶ್ರೀಮಠದಿಂದ ವಾಹನದ ಮೂಲಕ ಹೈದರಾಬಾದ್‌ಗೆ ತೆರಳಲಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ಡೆಹ್ರಾಡೂನ್ ತಲುಪಿ, ಕೇದಾರನಾಥಕ್ಕೆ ಪಯಣ ಬೆಳೆಸುವರು. ಅ.18ರಂದು ಅನುಷ್ಠಾನ ಮುಗಿಸಿ ಸೇಡಂಗೆ ವಾಪಸ್ ಆಗಲಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಪಂಚಾಕ್ಷರ ಸ್ವಾಮೀಜಿ, ಶಿವಯ್ಯಸ್ವಾಮಿ ಬಿಬ್ಬಳ್ಳಿ, ರಾಜಶೇಖರ ನಿಲಂಗಿ, ಶಂಕ್ರಪ್ಪ ಮಾಸ್ಟರ್ ಕೋಸ್ಗಿ, ಅನೀಲ ಐನಾಪುರ, ಶ್ರೀನಿವಾಸ ಕಾಸೋಜು, ಮಹಿಪಾಲರೆಡ್ಡಿ ಮುನ್ನೂರ, ಶಿವಶರಣಪ್ಪ ಚಂದನಕೇರಿ, ಜನಾರ್ಧನರೆಡ್ಡಿ ತುಳೇರ, ಶಿವಶರಣಪ್ಪ ಕಿರಣಗಿ ಇದ್ದರು.