ಜಿಲ್ಲೆ

ಕೇಡರ್ ಬೇಸ್​ನಲ್ಲಿ ಪಕ್ಷ ಕಟ್ಟಲು ಕ್ರಮ

ಶಿರಸಿ: ಚುನಾವಣೆ ಸಂದರ್ಭದ ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್​ನಲ್ಲಿ ಸಮಸ್ಯೆ ಆಗುತ್ತಿರುವ ಕಾರಣ ಕೇಡರ್ ಬೇಸ್ ಪಕ್ಷ ಕಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಆಗಮಿಸಿ ಪ್ರಮುಖರು, ಕಾರ್ಯಕರ್ತರು ನೀಡಿದ ಗೌರವ ಸ್ವೀಕರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಸಾರಥ್ಯ ವಹಿಸುವವರೆದುರು ಬಹಳ ಸವಾಲಿದೆ. ಪಕ್ಷ ಸಂಘಟನೆ, ನಾಯಕರ ನಡುವೆ ಹೊಂದಾಣಿಕೆ, ಮುಂಬರುವ ಚುನಾವಣೆಯ ಗೆಲುವು ಸೇರಿ ಹಲವು ಸವಾಲಿದೆ. ಜತೆಗೆ ಚುನಾವಣೆ ವೇಳೆ ಅಭ್ಯರ್ಥಿ ಆಯ್ಕೆಯಲ್ಲಿ ಸಮಸ್ಯೆ ಉದ್ಭವಿಸುತ್ತಿದೆ. ಹೀಗಾಗಿ ಕೇಡರ್ ಬೇಸ್ ಪಕ್ಷ ಕಟ್ಟಿದರೆ ಈ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

ಜೂನ್ 7ರಂದು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಹಾಗೂ ಮೂವರು ಕಾರ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ವಿವಿಧ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಬೆಂಗಳೂರಲ್ಲಿ ನಡೆಯುವ ಪದಗ್ರಹಣ ಕಾರ್ಯಕ್ರಮವನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಸಾರ ಮಾಡಲಾಗುವುದು. ಪದಗ್ರಹಣ ಸಮಾರಂಭದಲ್ಲಿ ಒಟ್ಟು 4 ಲಕ್ಷ ಕಾರ್ಯಕರ್ತರು ಭಾಗಿಯಾಗುವ ವಿಶ್ವಾಸವಿದೆ ಎಂದರು.

ಕರೊನಾ ವೈರಸ್ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಪ್ಯಾಕೇಜ್ ಘೊಷಿಸಿದೆ. ಆದರೆ, ಅರ್ಹ ಜನರಿಗೆ ಇನ್ನೂ ತಲುಪಿಲ್ಲ. ತಕ್ಷಣ ತಲುಪಿಸುವ ಕಾರ್ಯ ಆಗಬೇಕು ಎಂದ ಅವರು, ಕಳೆದ ವರ್ಷದ ಪ್ರವಾಹ ಪೀಡಿತರಿಗೆ ಸಮರ್ಪಕ ಪರಿಹಾರ ವಿತರಣೆಯಾಗಿಲ್ಲ. ಈ ಬಗ್ಗೆ 2 ಬಾರಿ ಪ್ರತಿಭಟಿಸಿದ್ದೇವೆ. ಇನ್ನೂ ಹೋರಾಟದ ಅಗತ್ಯವಿದೆ ಎಂದರು.

ರಾಜಕೀಯ ಇಚ್ಛಾಶಕ್ತಿಯ ಕಾರಣಕ್ಕೆ ಉತ್ತರ ಕರ್ನಾಟಕ ಎಲ್ಲ ರೀತಿಯ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಹಾಗಾಗಿ ಸಂಘಟಿತ ಹೋರಾಟ ಅಗತ್ಯವಿದೆ. ಪಕ್ಷಾಂತರ ನಿಷೇಧ ಕಾಯ್ದೆಗೆ ಬಲ ತುಂಬುವ ಕಾರ್ಯವಾದರೆ ಉತ್ತಮ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಗ್ರಾ.ಪಂ. ಚುನಾವಣೆ ಮುಂದೂಡುವ ಜತೆ ಬಿಜೆಪಿ ಕಾರ್ಯಕರ್ತರನ್ನು ನಾಮನಿರ್ದೇಶಿತ ಮಾಡಲು ಬಿಜೆಪಿ ಸಜ್ಜಾಗಿದೆ. ಇದು ಸರಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಮುಖರಾದ ಎಸ್.ಕೆ.ಭಾಗವತ, ಸುಷ್ಮಾ ರಾಜಗೋಪಾಲ ರೆಡ್ಡಿ, ಸಂತೋಷ ಶೆಟ್ಟಿ ಇತರರಿದ್ದರು.

ಬಿಜೆಪಿಯಲ್ಲಿ 25 ಶಾಸಕರ ಭಿನ್ನಮತ ಹೊರ ಬೀಳುವ ಹಂತದಲ್ಲಿದೆ. ಆದರೆ, ಅವರಿಗಾಗಿ ಆಪರೇಷನ್ ಕಾಂಗ್ರೆಸ್ ಮಾಡುವಷ್ಟು ಬ್ಯಾಂಕ್ ಬ್ಯಾಲೆನ್ಸ್ ನಮ್ಮಲ್ಲಿಲ್ಲ. ಹೊಸದಾಗಿ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. | ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷ