ಜಿಲ್ಲೆ

ಕೇಕ್ ತಿಂದ 38ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಹುಣಸೂರು: ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಬೇಕರಿಯಿಂದ ತಂದಿದ್ದ ಕೇಕ್ ಸೇವಿಸಿದ್ದ 38ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ-ಭೇದಿಯಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಬಿಳಿಕೆರೆ ಹೋಬಳಿ ಬೋಳನಹಳ್ಳಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಎಲ್ಲ ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ. ಜ.1ರ ಸಂಜೆ ಶಾಲೆಯ ಹಲವು ವಿದ್ಯಾರ್ಥಿಗಳು ಗ್ರಾಮದ ಎರಡು ಬೇಕರಿಗಳಲ್ಲಿ ಕೇಕ್ ಖರೀದಿಸಿ ಹೊಸ ವರ್ಷಾಚರಣೆಮಾಡಿದ್ದರು.

ಕೇಕ್ ತಿಂದ ಕೆಲ ಗಂಟೆಗಳಲ್ಲೇ ವಿದ್ಯಾರ್ಥಿಗಳು ವಾಂತಿ- ಭೇದಿಯಿಂದ ಬಳಲಿದ್ದರು. ಅವರನ್ನು ತಕ್ಷಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಂ.ಬಿ.ದಾಕ್ಷಾಯಿಣಿ ಸೂಕ್ತ ಚಿಕಿತ್ಸೆ ನೀಡಿ ವಿದ್ಯಾರ್ಥಿಗಳು ಗುಣಮುಖರಾದ ನಂತರ ಮನೆಗೆ ಕಳುಹಿಸಿದ್ದಾರೆ.

ಮಾರನೆಯ ದಿನ(ಜ.2)ರಂದು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೇ ತೆರನಾದ ಬಳಲಿಕೆಯೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ, ಎಲ್ಲರೂ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಬೋಳನಹಳ್ಳಿ ಮತ್ತು ಬಿಳಿಕೆರೆ ಆಸ್ಪತ್ರೆಗೆ ತೆರಳಿ ದಾಖಲಾದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.

ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಎಲ್ಲ ವಿದ್ಯಾರ್ಥಿಗಳು ಆರೋಗ್ಯದಿಂದ ಮನೆಗೆ ತೆರಳಿದ್ದಾರೆ. ಮುಂದಿನ 2-3 ದಿನಗಳ ಕಾಲ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದು, ಅದರಂತೆ ಶನಿವಾರವೂ ವಿದ್ಯಾರ್ಥಿಗಳು ತಪಾಸಣೆಗೆ ಒಳಗಾಗಿದ್ದಾರೆ. ಘಟನೆ ಕುರಿತು ಸಂಬಂಧಪಟ್ಟ ಶಾಲಾ ಮುಖ್ಯಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಿದ್ದೇನೆ ಎಂದು ತಿಳಿಸಿದರು.

ಸ್ಯಾಂಪಲ್ ಪರೀಕ್ಷೆಗೆ ಕೇಕ್ ಸಿಕ್ಕಿಲ್ಲ: ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಜ.2ರಂದು ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದಾಗ ಬೇಕರಿಗಳಲ್ಲಿ ಕೇಕ್ ಸ್ಯಾಂಪಲ್ ಪಡೆಯಲು ಯತ್ನಿಸಲಾಗಿದೆ. ಆದರೆ ಕೇಕ್ ಖಾಲಿಯಾಗಿದೆ ಎನ್ನಲಾಗಿದೆ. ಆದರೂ ಇಲಾಖೆಯಿಂದ ಆಹಾರ ನಿರೀಕ್ಷಕರಿಗೆ ಪತ್ರ ಮುಖೇನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.