ಬಾಗಲಕೋಟೆ: ಬಾಗಲಕೋಟೆ ನವನಗರದ ಯುನಿಟ್-೩ರಲ್ಲಿ ೨೦೦ ಎಕರೆ ಪ್ರದೇಶದಲ್ಲಿ ಒಂದೇ ಸೂರಿನಡಿ ವಾಣಿಜ್ಯ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯ ಇರುವ ೩೬೦ ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡುವಂತೆ ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಅವರು ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಬಾಗಲಕೋಟೆ ನಗರದ ಬಹುಭಾಗ ಮುಳುಗಡೆಯಾಗಿದ್ದು, ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲಾಗುತ್ತಿದೆ. ಆದರೆ, ಮುಳುಗಡೆ ಕಾರಣದಿಂದ ಬಾಗಲಕೋಟೆ ನಗರದ ವ್ಯಾಪಾರ-ವಹಿವಾಟು ಸಂಪೂರ್ಣ ಹರಿದು ಹಂಚಿ ಹೋಗಿದೆ. ಇದರಿಂದ ಒಂದು ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ನಡೆದು, ಸರ್ಕಾರಕ್ಕೆ ಅತೀ ಹೆಚ್ಚು ತೆರಿಗೆ ಪಾವತಿಸುತ್ತಿದ್ದ ಇಲ್ಲಿನ ವ್ಯಾಪಾರಸ್ಥರು ಇದೀಗ ವ್ಯಾಪಾರ ಕುಸಿತಗೊಂಡು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕುಸಿದು ಹೋಗಿರುವ ಬಾಗಲಕೋಟೆ ನಗರದ ವ್ಯಾಪಾರಕ್ಕೆ ಪುನಶ್ಚೇತನ ನೀಡುವ ಕಾರ್ಯಕ್ಕೆ ನಮ್ಮ ಸರ್ಕಾರ ಮುಂದಾಗಿದ್ದು, ನವನಗರದ ಯುನಿಟ್-೩ರಲ್ಲಿ ಒಂದೆಡೆ ವಾಣಿಜ್ಯ ವಲಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಮುಂದುವರೆದ ಭಾಗವಾಗಿ ಒಂದೆಡೆ ವಾಣಿಜ್ಯ ಕೇಂದ್ರ ಸ್ಥಾಪಿಸಲು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದಿಂದ ೩೬೦ ಕೋಟಿ ರೂ.ಗಳ ವಿಸ್ತÈತ ಯೋಜನಾ ವರದಿ ಸಿದ್ದಪಡಿಸಲಾಗಿದೆ.
ಬಾಗಲಕೋಟೆ ನವನಗರದ ಯುನಿಟ್ ೧, ೨, ೩ ಎಂದು ಭಾಗಗಳಾಗಿ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಒಂದೆಡೆ ವಾಣಿಜ್ಯ ಕೇಂದ್ರ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ಇದು ನಮ್ಮ ಕಾಂಗ್ರೆಸ್ ಪಕ್ಷದ ಬಹುದಿನಗಳ ಕನಸು ಸಹ ಆಗಿದೆ. ಈ ಕಾರ್ಯ ಪೂರ್ಣಗೊಂಡರೆ ಬಾಗಲಕೋಟೆ ವ್ಯಾಪಾರಸ್ಥರೆಲ್ಲ ಒಂದೇ ಸೂರಿನಡಿ ವ್ಯಾಪಾರ ವಹಿವಾಟು ನಡೆಸಲು ಬಹಳ ಅನುಕೂಲವಾಗುತ್ತದೆ. ಇದರಿಂದ ಸಂತ್ರಸ್ತರಿಗೆ ಪುನರ್ ವಸತಿ ಜೊತೆಗೆ ಪುನರ್ ನಿರ್ಮಾಣ ಮಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಬಿಟಿಡಿಎಯಿಂದ ಈಗಾಗಲೇ ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. ಮಾರುಕಟ್ಟೆ ನಿರ್ಮಾಣಕ್ಕೆ ೩೬೦ ಕೋಟಿ ರೂ. ಅನುದಾನ ಬೇಕಿದ್ದು, ಮಂಜೂರು ಮಾಡುವಂತೆ ಮನವಿ ಪತ್ರದಲ್ಲಿ ಶಾಸಕ ಮೇಟಿ ಅವರು ತಿಳಿಸಿದ್ದಾರೆ.
ಶಾಸಕ ಮೇಟಿ ಅವರ ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಅವರು, ಇದನ್ನು ಪರಿಶೀಲಿಸಿ ತಮಗೆ ಪ್ರಸ್ತಾವನೆ ಸಲ್ಲಿಸುವಂತೆ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಬರೆದಿದ್ದಾರೆ. ಈ ವೇಳೆ ಶಾಸಕ ಎಚ್.ವೈ.ಮೇಟಿ ಅವರ ಜೊತೆಗೆ ಹೊಳೆಬಸು ಶೆಟ್ಟರ ಇದ್ದರು.