ಬಾಗೇಪಲ್ಲಿ : ಕೋವಿಡ್ ಕೇರ್ ಸೆಂಟರ್ ನಿರ್ವಹಣಾಧಿಕಾರಿಗಳು ಹಾಗೂ ವೈದ್ಯ ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿ ವಾಸವಿರಬೇಕು, ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಎಚ್ಚರಿಕೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಹಾಗೂ ಆಗ್ನಿಶಾಮಕ ಠಾಣೆ ಹಿಂಭಾಗದ ಸರ್ಕಾರಿ ವಸತಿ ನಿಲಯದಲ್ಲಿ ಕೇರ್ ಸೆಂಟರ್‌ಗೆ ಶನಿವಾರ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿದ ಅವರು, ಸೋಂಕು ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ನೋಡಲ್ ಅಧಿಕಾರಿಗಳು ತಾಲೂಕು ಕೇಂದ್ರಸ್ಥಾನದಲ್ಲೇ ಉಳಿದುಕೊಳ್ಳಬೇಕು. ಅವರಿಗೆ ಅಗತ್ಯಿವಿರುವ ವಸತಿ ಸೌಲಭ್ಯ ಕಲ್ಪಿಸುವಂತೆ ತಹಸೀಲ್ದಾರ್ ಮತ್ತು ಟಿಎಚ್‌ಒಗೆ ಸೂಚಿಸಿದರು.
ಕರೊನಾ 2ನೇ ಅಲೆಯ ತೀವ್ರತೆ ಪರಿಣಮಕಾರಿಯಾಗಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕಾಗಿದೆ. ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಹ ದೊರೆತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಲತಾ, ಟಾಸ್ಕ್ ಪೋರ್ಸ್ ಸಮಿತಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದರೆ ಸೋಂಕಿಗೆ ಕಡಿವಾಣ ಹಾಕಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವೀಕೆಂಡ್ ಕರ್ಪ್ಯೂನ ಶನಿವಾರ ಮತ್ತು ಭಾನುವಾರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ, 10 ಗಂಟೆ ನಂತರ ಮೆಡಿಕಲ್ ಸ್ಟೋರ್ ಹೊರತುಪಡಿಸಿ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು ವಾಹನಗಳ ನಿಯಂತ್ರಕ್ಕಾಗಿ ತಾಲೂಕಿನ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ತಾಪಂ ಇಒ ಮಂಜುನಾಥಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವಿ.ಪಂಕಜಾರೆಡ್ಡಿ, ಸಿಡಿಪಿಒ ರಾಜೇಂದ್ರ ಪ್ರಸಾದ್, ಪೊಲೀಸ್ ವೃತ್ತ ನಿರೀಕ್ಷಕ ರಾಜು, ನೋಡಲ್ ಅಧಿಕಾರಿ ಮಹಬೂಬ್ ಬಾಷ ಮತ್ತಿತರರು ಇದ್ದರು.