ಜಿಲ್ಲೆ

ಕೇಂದ್ರದಿಂದ ವೀರಶೈವ ಲಿಂಗಾಯತರ ಸಮಾಜಕ್ಕೆ ಅನ್ಯಾಯ: ಸಾದರನಹಳ್ಳಿ ನಟರಾಜ್ ತೀವ್ರ ಖಂಡನೆ

ಹಾಸನ: ವೀರಶೈವ ಲಿಂಗಾಯತ ಸಮಾಜ ಕೇವಲ ಕರ್ನಾಟಕ ರಾಜ್ಯವಲ್ಲದೆ ನೆರೆಯ ಆಂಧ್ರ, ತಮಿಳುನಾಡು. ಮಹಾರಾಷ್ಟ್ರ ಸೇರಿದಂತೆ ಇನ್ನೂ ಮುಂತಾದ ರಾಜ್ಯದಲ್ಲಿನ ಬಹುಸಂಖ್ಯಾತ ಸಮುದಾಯದಕ್ಕೆ ಕೇಂದ್ರ ಸರ್ಕಾರ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದರನಹಳ್ಳಿ ನಟರಾಜ್ ಖಂಡಿಸಿದರು.

ನಗರದ ತಣ್ಣೀರುಹಳ್ಳಿ ಮಠದ ಸಭಾಂಗಣದಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ನೂತನ ಕಚೇರಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮಾಜ ರಾಜಕೀಯ ಸ್ಥಾನ ಮಾನದಿಂದ ವಂಚಿತವಾಗುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿ ಸಂಘಟನೆ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ಶಂಕರ್ ಬಿದರಿ ಅವರು ಪ್ರತಿ ಮನೆ ಮನೆಯಲ್ಲಿ ಕೂಡ ಮಹಾಸಭಾಕ್ಕೆ ಸದಸ್ಯತ್ವ ಮಾಡಿಸಬೇಕು. ಹಾಗೆಯೇ ಹಾಸನ ಜಿಲ್ಲೆಯಲ್ಲಿ ನಾಲ್ಕು ಲಕ್ಷ ಜನಸಂಖ್ಯೆ ಇದೆ. ಆದರೆ 8466 ಸದಸ್ಯತ್ವವಿದೆ. ಮುಂದಿನ 2026ರ ಒಳಗೆ ಕನಿಷ್ಠ ಪ್ರತಿ ತಾಲೂಕಿನಲ್ಲಿ 10 ಸಾವಿರ ಸದಸ್ಯರನ್ನು ಮಾಡಬೇಕು. ಈ ಬಗ್ಗೆ ತಾಲೂಕು ಅಧ್ಯಕ್ಷರು ಕಾರ್ಯಪ್ರವೃತ್ತಿ ಕಡೆ ಗಮನ ನೀಡಬೇಕು. ಸಂಘಟನೆಗೆ ಒತ್ತು ನೀಡುವ ದಿಸೆಯಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ಈ ಭಾರಿ ಬಸವ ಜಯಂತಿಯನ್ನು ಅದ್ದೂರಿಯಿಂದ ಆಚರಿಸಬೇಕೆಂದು ಕರೆ ನೀಡಿದರು.

ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದಿಂದ ಜಾತಿ ಜನ ಗಣತಿಯನ್ನು ಮುಂದಿಟ್ಟುಕೊಂಡು ಬರುತ್ತಿರುವುದು ನಿಜಕ್ಕೂ ಶೋಚನೀಯ. ಸರ್ವರು ಸಂಘಟನೆಗೆ ಸಹಕಾರ ನೀಡಿದರೆ ಮಾತ್ರ ಇಂತಹ ದುಷ್ಟ ಶಕ್ತಿಗಳಿಂದಗಳಿಂದ ಸಮಾಜವನ್ನು ಸಂಘಟಿಸಬಹುದು ಎಂದರು.

ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ನವಿಲೆ ಪರಮೇಶ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತನ್ನದೆಯಾದ ಛಾಪು ಮೂಡಿಸುವ ಜತೆಗೆ ಸಂಘಟನೆ ಒತ್ತು ನೀಡುತ್ತಾ ಬಂದಿದೆ. ಇಡೀ ಜಿಲ್ಲೆ ನಾಲ್ಕು ಲಕ್ಷ ಸಮಾಜದವರು ಮಹಾಸಭಾಕ್ಕೆ ನೋಂದಣಿ ಮಾಡಿಕೊಂಡರೆ ಮಾತ್ರ ಅಗತ್ಯ ನಮ್ಮದೆ ಹಕ್ಕುಗಳನ್ನು ಪಡೆಯಲು ಸಾದ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಸಮಿತಿಯ ಅಭಿಪ್ರಾಯದಿಂದ ತಣ್ಣೀರುಹಳ್ಳ ಮಠದ ಸಮೀಪದಲ್ಲಿಯೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯಾಲಯವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಪುಷ್ಪಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸಮಾಜ ಮುಖಂಡ ಎನ್.ಆರ್.ಸಂತೋಷ, ರಾಜ್ಯ ಮಟ್ಟದ ಉಪಾಧ್ಯಕ್ಷೆ ರಾಜೇಶ್ವರಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಭಾ, ರಾಷ್ಟ್ರೀಯ ಘಟಕ ಉಪಾಧ್ಯಕ್ಷರಾದ ಬಿ.ಕೆ.ಚಂದ್ರಕಲಾ, ರಾಜ್ಯ ಯುವ ಘಟಕ ಅಧ್ಯಕ್ಷ ಮನೋಹರ ಅಬ್ಬಿಗೆರೆ, ಮಹಾಸಭಾದ ತಾಲೂಕು ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಬಸವರಾಜ, ಅಜೀತ್, ಬಿ.ಎಂ.ರವಿಕುಮಾರ್ ಇನ್ನೂ ಮುಂತಾದವರು ಹಾಜರಿದ್ದರು.