ಚಾಮರಾಜನಗರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆಯವ್ಯಯ ಚುನಾವಣಾ ಪೂರ್ವ ಬಜೆಟ್ ಆಗಿದ್ದು, ಯಾವುದೇ ಮಹತ್ವ ಇಲ್ಲ ಎಂದು ಆರ್ಥಿಕ ತಜ್ಞ ಪ್ರೊ.ಆರ್.ಎಂ.ಚಿಂತಾಮಣಿ ಅಭಿಪ್ರಾಯಪಟ್ಟರು.
ನಗರದ ರೋಟರಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರೋಟರಿ ವಾರದ ವಿಶೇಷ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯವ್ಯಯವನ್ನು ವಿಶ್ಲೇಷಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡೇ ಕೇಂದ್ರ ಬಜೆಟ್‌ನಲ್ಲಿ ಕೆಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ಬಜೆಟ್ ವಾಸ್ತವವಾಗಿ ಉತ್ತಮವಾಗಿದೆ ಎಂದು ಮೇಲ್ನೋಟಕ್ಕೆ ಹೇಳಲೇಬೇಕು. ಏಕೆಂದರೆ ಎರಡು ಮಹತ್ವದ ಅಂಶ ಹೊಂದಿವೆ ಎಂದರು.
ಅತಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಗಳ ನಿರ್ಮಾಣ, ಹೂಡಿಕೆ ಮಾಡುವುದಕ್ಕೆ ಪ್ರಸ್ತಾವನೆ ಇದೆ. ಎಲ್ಲ ರಾಜ್ಯ ಸರ್ಕಾರಗಳು ಜನೋಪಯೋಗಿ ಆಸ್ತಿಗಳ ನಿರ್ಮಾಣ ಹಾಗೂ ತಂತ್ರಜ್ಞಾನ ಅಳವಡಿಕೆಯು ಕೃಷಿ ಸೇರಿ ಎಲ್ಲ ರಂಗಗಳಲ್ಲೂ ಹೆಚ್ಚಾಗಬೇಕು ತಂತ್ರಜ್ಞಾನ ಅಳವಡಿಕೆಗಾಗಿ ಒಟ್ಟು ಮುಂಗಡಪತ್ರದ ಶೇ. 2ರಷ್ಟು ವೆಚ್ಚ ಮಾಡುತ್ತಿದ್ದಾರೆ. ಕೃಷಿಗೆ ಒತ್ತು, ರೈತ ಸಾಲ ಹೆಚ್ಚು ಮಾಡಲಾಗಿದೆ. ಬಡ್ಡಿ ರಹಿತ ಅಲ್ಪಾವಧಿ ಸಾಲ, ಶಿಕ್ಷಣಕ್ಕೆ ಒತ್ತು, ರೈಲ್ವೆ, ರಸ್ತೆಗೆ ಒತ್ತು ಕೊಟ್ಟಿದ್ದಾರೆ ಎಂದು ಹೇಳಿದರು.
ಐದಾರು ಯೋಜನೆಗಳನ್ನು ಬಿಟ್ಟು ಉಳಿದ ಯಾವುವೂ ಜನಪ್ರಿಯವಲ್ಲ. ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಬಹುತೇಕ ಚುನಾವಣೆ ಪೂರ್ವ ಉದ್ದೇಶದ್ದು, ಆಡಳಿತ ವೆಚ್ಚ ಕಡಿಮೆ ಆಗಬೇಕು. ಅಲ್ಲಿ ಉಳಿತಾಯ ಮಾಡಿದನ್ನು ಹೂಡಿಕೆ ಮಾಡಿದಾನ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ತೆರಿಗೆ, ತೆರಿಗೇತರ ಆದಾಯದಲ್ಲಿ ಸ್ವಲ್ಪ ಉಳಿತಾಯ ಮಾಡಿ. ಉಳಿದಿದ್ದನ್ನು ಮಾತ್ರ ದಿನನಿತ್ಯ ವೆಚ್ಚ, ಬಡ್ಡಿಗೆ ಖರ್ಚು ಮಾಡಬೇಕು. ಬೇರೆ ಕಡೆ ಆಸ್ತಿ ಮಾರಾಟ ಮಾಡಿ ಬಡ್ಡಿ ಕೊಡಲು ಹಾಗೂ ನಿಗಮಗಳ ಅಧ್ಯಕ್ಷರು, ಸದಸ್ಯರುಗಳಿಗೆ ದಿನಭತ್ಯೆ, ಗೌರವ ಭತ್ಯೆ ಕೊಡುವುದಕ್ಕೆ ಬಳಸಬಾರದು. ಆದರೆ ಇದು ನಮ್ಮ ದೇಶದಲ್ಲಿ ಹೆಚ್ಚಾಗಿದೆ. ಎಲ್ಲ ಸರ್ಕಾರಗಳು ಈ ಪ್ರವೃತ್ತಿ ರೂಢಿಸಿಕೊಂಡಿವೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯಂತರ ಮುಂಗಡಪತ್ರ ಮಂಡಿಸಿದ್ದಾರೆ. ವಾಸ್ತವವಾಗಿ ಮಧ್ಯಂತರ ಬಜೆಟ್ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಅದರಲ್ಲಿ ವಿಶೇಷ ಯೋಜನೆಗಳು ಬೇಕಾಗಿರಲ್ಲ. ಯೋಜನೆ ಮಾಡಿದರೂ ಜಾರಿಯಾಗುವ ಸಾಧ್ಯತೆ ಬಹಳ ಕಡಿಮೆ. ಇದೇ ಸರ್ಕಾರವೇ ರಾಜ್ಯದಲ್ಲಿ ಮತ್ತೆ ಬಂದರೂ ಕೂಡ ಚಾಲ್ತಿಗೆ ಬರುವುದಿಲ್ಲ. ಹೊಸ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಪ್ರಕಾರ ಹೊಸ ಮುಂಗಡಪತ್ರವನ್ನು ಪೂರ್ಣಾವಧಿಗೆ ಮಂಡಿಸಬೇಕಾಗುತ್ತದೆ ಎಂದರು.
ರೋಟರಿ ಅಧ್ಯಕ್ಷ ಕೆ. ಎಂ. ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರೋಟರಿ ಕಾರ್ಯದರ್ಶಿ ಕಾಗಲವಾಡಿ ಚಂದ್ರ, ರೋಟರಿ ಸಂಸ್ಥಾಪಕ ಸದಸ್ಯರಾದ ಸಿ. ವಿ. ಶ್ರೀನಿವಾಸಶೆಟ್ಟಿ, ಜಿ. ಆರ್. ಅಶ್ವಥ್‌ನಾರಾಯಣ್, ವೆಂಕಟನಾಗಪ್ಪಶೆಟ್ಟಿ, ಚಂದ್ರಪ್ರಭಜೈನ್, ಗೋಪಾಲ್, ದೀನಾ ಚೆಕ್‌ಪೋಸ್ಟ್, ಅಂಕಶೆಟ್ಟಿ, ಸತೀಶ್, ಕಮಲ್ ರಾಜು, ಅಶೋಕ್, ರಾಜು ವರ್ಗೀಸ್, ಇಂಜಿನಿಯರ್ ನಂಜುಂಡಸ್ವಾಮಿ, ಮೋಹನ್, ಡಾ. ಗೋವಿಂದ ಶೆಟ್ಟಿ, ಯೋಗರಾಜು, ಯು ರಾಜೇಂದ್ರ, ಸಿದ್ದಮಲ್ಲಪ್ಪ ಇತರರು ಭಾಗವಹಿಸಿದ್ದರು.