ಲಕ್ಷ್ಮೇಶ್ವರ: ಕೇಂದ್ರ ಸರ್ಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ಮತ್ತು ಅನುದಾನ ನೀಡುತ್ತಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ತಾಲೂಕಿನ ಸೂರಣಗಿ ಗ್ರಾಮದಲ್ಲಿ ಗ್ರಾಮ ಸಡಕ್ ಯೋಜನೆಯಡಿ ಸಂಸದರ 13 ಕೋಟಿ ರೂ. ಅನುದಾನದಲ್ಲಿ ಕೊಂಚಿಗೇರಿ- ಸೂರಣಗಿ, ದೊಡ್ಡೂರ ತಾಂಡಾ, ಸುವರ್ಣಗಿರಿ-ಸೂರಣಗಿ ರಸ್ತೆ ಸೇರಿ ಒಟ್ಟು 16.34 ಕಿ.ಮೀ ರಸ್ತೆ ನಿರ್ವಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರ ಪ್ರಾಕೃತಿಕ ವಿಕೋಪ, ರಕ್ಷಣೆ ಮತ್ತು ಕರೊನಾದಂತಹ ಮಹಾಮಾರಿಯ ಸುಳಿಗೆ ಸಿಲುಕಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೂ ಜನರ ಆರೋಗ್ಯ, ಅವರಿಗೆ ಜೀವನಾವಶ್ಯಕ ವಸ್ತುಗಳ ಸರಬರಾಜು, ಮೂಲಸೌಲಭ್ಯ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರ ವಿಶ್ವಾಸ ಗಳಿಸಿದೆ. ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದೆಲ್ಲೆಡೆ ಉತ್ತಮ ರಸ್ತೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಸೌಲಭ್ಯ ನೀಡುವ ಮೂಲಕ ಗ್ರಾಮೀಣ ಜನರ ಬದುಕು ಹಸನಾಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸದ್ಯ ದಿನೇ ದಿನೆ ಕರೊನಾ ಹಾವಳಿ ಹೆಚ್ಚುತ್ತಿದ್ದು ಈ ಮಹಾಮಾರಿ ತಡೆಗಟ್ಟಲು, ನಮ್ಮವರ ಆರೋಗ್ಯ ಕಾಪಾಡಲು ಪ್ರತಿಯೊಬ್ಬರೂ ಸಹಕಾರ, ತ್ಯಾಗ, ಸಂಕಲ್ಪ ಮಾಡಬೇಕಿದೆ ಎಂದರು.