ಜಿಲ್ಲೆ

ಕೇಂದ್ರದಿಂದ ಕರ್ನಾಟಕಕ್ಕೆ ಖಾಲಿ ಚೊಂಬು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕೆ

ಮೈಸೂರು: ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಖಾಲಿ ಚೊಂಬು, ಖಾಲಿ ತೆಂಗಿನ ಚಿಪ್ಪು, ಮೂರು ನಾಮ ಹಾಕಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.

ದೇಶದ ಪ್ರತಿ ವ್ಯಕ್ತಿ ಮೇಲೆ 3.5 ಲಕ್ಷ ರೂ. ಸಾಲ ಇದೆ. ದೇಶದ ಮೇಲಿನ ಸಾಲವನ್ನು 205 ಕೋಟಿ ರೂ. ಏರಿಕೆ ಮಾಡಿದ್ದೇ ಬಿಜೆಪಿ ಸಾಧನೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ ಅವರು, ಖಾಲಿ ಚೆಂಬು, ತೆಂಗಿನಕಾಯಿ ಚಿಪ್ಪು ಪ್ರದರ್ಶಿಸುವ ಮೂಲಕ ಕೇಂದ್ರ ಬಜೆಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು.

ಇದು ರಾಜ್ಯಕ್ಕೆ ಶೂನ್ಯ ಬಜೆಟ್ ಆಗಿದೆ. ಜಿಎಸ್‌ಟಿ ಹಣವದಲ್ಲೂ ಅನ್ಯಾಯ ಮಾಡಿದೆ. ನರೇಗಾ ಯೋಜನೆಯಲ್ಲೂ ಅನುದಾನ ಕಡಿಮೆ ಮಾಡಿದೆ. ಕೃಷಿ ಕ್ಷೇತ್ರದ ಅನುದಾನದಲ್ಲೂ ಗಣನೀಯ ಇಳಿಕೆಯಾಗಿದೆ. ಮೇಕ್ ಇಂಡಿಯಾ, ಸ್ಟಾೃಂಡ್ ಅಪ್ ಇಂಡಿಯಾ ಅನುಷ್ಠಾನಕ್ಕೆ ಕೇವಲ 100 ಕೋಟಿ ರೂ. ನೀಡಿದೆ. ಕಾರ್ಪೊರೇಟ್ ಕಂಪನಿಗಳ ಟ್ಯಾಕ್ಸ್ ಕಡಿಮೆ ಮಾಡುವ ಮೂಲಕ ಕ್ರೂರಿ ಕ್ಯಾಪಿಟಲಿಸ್ಟ್‌ಗಳನ್ನು ಓಲೈಸಲಾಗಿದೆ ಎಂದೂ ದೂರಿದರು.

ಮನಮೋಹನ್‌ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಬಜೆಟ್ ಗಾತ್ರ 14 ಲಕ್ಷ ಕೋಟಿ ರೂ. ಆಗಿತ್ತು. ಈ ಸಲ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂ. ಆಗಿದೆ. 16 ಲಕ್ಷ ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ.

1947ರಿಂದ 2014 ನಮ್ಮ ದೇಶ ಮಾಡಿದ್ದ ಸಾಲ 53 ಲಕ್ಷ ಕೋಟಿ ಮಾತ್ರ. ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ 10 ವರ್ಷದಲ್ಲಿ 205 ಲಕ್ಷ ಕೋಟಿ ರೂ.ಗೆ ಸಾಲ ಹೆಚ್ಚಳವಾಗಿದೆ. ದೇಶವನ್ನು ಸಾಲದ ಕೂಪಕ್ಕೆ ತಳ್ಳಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ತಲೆ ಮೇಲೆ ಮೂರುಕಾಲು ಲಕ್ಷ ರೂ. ಸಾಲ ಏರಿದೆ ಎಂದು ಹರಿಹಾಯ್ದರು.

ಇದು ಇಂಡಿಯಾ ಬಜೆಟ್ ತರ ಕಾಣುತ್ತಿಲ್ಲ. ಬಿಹಾರದ ಬಜೆಟ್ ತರ ಕಾಣ್ತಾ ಇದೆ. ಬಿಹಾರಕ್ಕೆ 78 ಸಾವಿರ ಕೋಟಿ ರೂ. ಮೊತ್ತದ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಎಲ್ಲೆಲ್ಲಿ ಚುನಾವಣೆ ಬರುತ್ತದೆಯೋ ಅಲ್ಲಿಗೆ ವಿಶೇಷ ಪ್ಯಾಕೇಜ್ ಕೊಟ್ಟು ಮತದಾರರ ಓಲೈಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಒಂದೇ ಒಂದು ಯೋಜನೆ ತರಲು ಸಾಧ್ಯವಾಗಿಲ್ಲ. ನಮ್ಮ ಸಂಸದರು ಮತ್ತು ಸಚಿವರು ತಮಿಳುನಾಡಿನವರನ್ನು ನೋಡಿ ಕಲಿಯಬೇಕು. ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಂದಾಗುತ್ತಾರೆ. ನಮ್ಮಲ್ಲಿ ದಿನಬೆಳಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸುತ್ತ ಕಾಲಹರಣ ಮಾಡುತ್ತಾರೆ ಎಂದು ಹೇಳಿದರು.

ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಇದ್ದರು