ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಜನರ ಆರೋಗ್ಯದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಕಷ್ಟು ಕಾಳಜಿ ಹೊಂದಿದ್ದಾರೆ. ಹೀಗಾಗಿ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುವುದರ ಜತೆಗೆ ಅನೇಕ ಸೌಲಭ್ಯ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ಐಎಂಎ ಧಾರವಾಡ, ಡಾ. ಜಂಬಗಿ ಹಾಗೂ ಡಾ. ರಾಮನಗೌಡರ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಪ್ರತಿ ವರ್ಷ 54 ಸಾವಿರ ವೈದ್ಯರು ಹೊರ ಬರುತ್ತಿದ್ದರು. ಈಗ ಅದು ವರ್ಷಕ್ಕೆ 1 ಲಕ್ಷಕ್ಕೆ ಏರಿದೆ. ವೈದ್ಯಕೀಯ ಕೋರ್ಸ್ ಬಳಿಕ ಆಯಾ ವಿಷಯದ ನುರಿತ ತಜ್ಞರು ಆಗುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದರು.
ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸಮಸ್ಯೆ ಇವೆ. ರಷ್ಯಾ-ಉಕ್ರೇನ್‌ದಿಂದ ಯೂರಿಯಾ, ಡಿಎಪಿ ಬರುತ್ತದೆ. ಹೀಗಾಗಿ ರಸಗೊಬ್ಬರ ಬೆಲೆ ಜಾಸ್ತಿ ಆಗಿದೆ. ಆದರೆ ರೈತರಿಗೆ ಹೊರೆಯಾಗದಿರಲಿ ಎಂದು ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಮೊದಲು ಯಾರು, ಎಲ್ಲಿ ಬೇಕಲ್ಲಿ ಬಾಂಬ್ ಹಾಕಿ ಓಡಿ ಹೋದಾಗ ಆಗ ಅಳುತ್ತ ಕೂಡುತ್ತಿದ್ದೆವು. ಆದರೆ ಈಗ ಬಾಂಬ್ ಹಾಕಿದವರ ಮನೆಗೆ ನುಗ್ಗಿ ಹೊಡೆಯುವ ಸಾಮರ್ಥ್ಯ ಬೆಳೆದಿದೆ. ಭಾರತವನ್ನು ಯಾರೂ ಕೆಂಗಣ್ಣಿನಿಂದ ನೋಡುವುದಿಲ್ಲ. ಹಾಗೆ ನಾವು ನಮ್ಮ ಸೈನ್ಯ ಬಲಪಡಿಸಿದ್ದೇವೆ. ಜಿಲ್ಲೆಗೆ 1400 ಕೋಟಿ ರೂ. ನೀರಿನ ಯೋಜನೆ ನೀಡಲಾಗಿದೆ. ಈ ಅನುದಾನದಲ್ಲಿ ಮಲಪ್ರಭಾ ಜಲಾಶಯದ ನೀರು ಪ್ರತಿ ಹಳ್ಳಿಗೆ ಬರಲಿದೆ ಎಂದರು.
ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಕರಡಿಗುಡ್ಡ ಗ್ರಾಮದಲ್ಲಿ ಆರೋಗ್ಯ ಶಿಬಿರ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಹೆಬ್ಬಳ್ಳಿ, ಉಪ್ಪಿನಬೆಟಗೇರಿ ಗ್ರಾಮಗಳಲ್ಲೂ ನಡೆಯಲಿವೆ. ನನ್ನ ಗೆಳೆಯರ ಬಳಗದಿಂದ ಮುಂದಿನ ಜನವರಿಯೊಳಗೆ ಲಕ್ಷ ಜನರ ಆರೋಗ್ಯ ತಪಾಸಣೆ ನಡೆಸುವ ಗುರಿ ಇದೆ. ಇದಕ್ಕೆ ಪ್ರಲ್ಹಾದ ಜೋಶಿ ಸಹಕಾರ ಅಗತ್ಯ. 2024ರ ಲೋಕಸಭಾ ಚುನಾವಣೆಯಲ್ಲಿ ಜೋಶಿ ಪುನಃ ಆಯ್ಕೆಯಾಗಬೇಕು. ಸದ್ಯ ಕೇಂದ್ರ ಟಾಪ್ 5 ಮಂತ್ರಿಯಾಗಿದ್ದಾರೆ. ಮುಂದಿನ ಅವಧಿಯಲ್ಲಿ ಟಾಪ್ 3 ಸಚಿವರಾಗಬೇಕು ಎಂದರು.
ಉಪ್ಪಿನಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕಿ ಸೀಮಾ ಮಸೂತಿ, ಡಾ. ಕ್ರಾಂತಿಕಿರಣ, ಡಾ. ಮಹೇಶ ನಾಲವಾಡ, ಡಾ. ಸುಧೀರ ಜಂಬಗಿ, ಡಾ. ಎಸ್.ಆರ್. ರಾಮನಗೌಡರ, ಕರಡಿಗುಡ್ಡ ಗ್ರಾಪಂ ಅಧ್ಯಕ್ಷೆ ಸುರೇಖಾ ಉಳ್ಳಿಗೇರಿ, ಉಪಾಧ್ಯಕ್ಷೆ ದ್ಯಾಮವ್ವ ಮಾದರ, ಗೋವಿಂದ ಜೋಶಿ, ಗ್ರಾಮಸ್ಥರು, ಇತರರು ಇದ್ದರು.