ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅಖಿಲ ಭಾರತ ಬಿಎಸ್‌ಎನ್‌ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ದಿ ಜಿಲ್ಲಾ ಸಂಘದ ಪದಾಧಿಕಾರಿಗಳು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ ಅಂಗೀಕೃತಗೊಳಿಸಿರುವ ಹಣಕಾಸಿನ ಮಸೂದೆ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಮಾಡಿರುವ ಅನ್ಯಾಯ ಎಂದು ಆರೋಪಿಸಿದರು. ಹಿರಿಯಣ್ಣ, ರಾಘವೇಂದ್ರ, ವೆಂಕಟೇಶ್, ರಾಜೇಂದ್ರ ಅನ್ವರ್ ಮತ್ತಿತರರಿದ್ದರು. 
ಜಿಲ್ಲೆ

ಕೇಂದ್ರದ ಹಣಕಾಸಿನ ಮಸೂದೆ ಖಂಡಿಸಿ ಪಿಂಚಣಿದಾರರ ಪ್ರತಿಭಟನೆ

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ ಅಂಗೀಕೃತಗೊಳಿಸಿರುವ ಹಣಕಾಸಿನ ಮಸೂದೆ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಮಾಡಿರುವ ಅನ್ಯಾಯ ಎಂದು ಅಖಿಲ ಭಾರತ ಬಿಎಸ್‌ಎನ್‌ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ದಿ ಜಿಲ್ಲಾ ಸಂಘದ ಪದಾಧಿಕಾರಿಗಳು ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ಕೇಂದ್ರ ಸರ್ಕಾರವು ದಿನೇ ದಿನೇ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಇದೀಗ ಲೋಕಸಭೆಯಲ್ಲಿ ಮಂಡಿಸಿದ ಹಣಕಾಸು ಮಸೂದೆಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಪರಿಷ್ಕರಣೆ ಇರುವುದಿಲ್ಲ ಎಂದು ಹೇಳುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದರು.

೧೯೭೨ರ ಪಿಂಚಣಿ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿದೆ. ೧೯೮೩ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಸಂವಿಧಾನ ಪೀಠದ ತೀರ್ಪೀನ ಪ್ರಕಾರ ಪಿಂಚಣಿಯನ್ನು ಪರಿಷ್ಕರಿಸಿ ಹಿಂದಿನ ಮತ್ತು ಹೊಸಬರಿಗೆ ಯಾವುದೇ ರೀತಿಯ ತಾರತಮ್ಯ ಮಾಡಬಾರದೆಂಬ ಮಹತ್ವದ ತೀರ್ಪನ್ನು ನ್ಯಾಯಾಲಯ ನೀಡಿದೆ ಎಂದು ಹೇಳಿದರು.

ಈ ರೀತಿಯ ಪರಿಷ್ಕರಣೆ ಪಿಂಚಣಿದಾರರಿಗೆ ಸರ್ಕಾರ ಕೊಟ್ಟಿರುವ ದೊಡ್ಡ ಆಘಾತ. ಸತತ ಬೆಲೆ ಏರಿಕೆಯಿಂದ ಬದುಕು ದುಸ್ತರವಾಗಿದೆ. ಪಿಂಚಣಿ ಪರಿಷ್ಕರಣೆ ಮಾಡುವುದಿಲ್ಲ ಎಂಬ ಸರ್ಕಾರದ ಹುನ್ನಾರ ಸಂವಿಧಾನ ಬಾಹಿರ. ಈ ಬಗ್ಗೆ ಸಂವಿಧಾನದಲ್ಲೂ ಸಹ ಪಿಂಚಣಿದಾರರಿಗೆ ರಕ್ಷಣೆಯನ್ನು ಕೊಟ್ಟಿದೆ ಎಂದರು.

ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರ ನೇತೃತ್ವದ ಸಂವಿಧಾನ ಪೀಠ ಪಿಂಚಣಿಯಲ್ಲಿ ಯಾವುದೇ ತಾರತಮ್ಯ ಮಾಡುವಾಗಿಲ್ಲ, ಪಿಂಚಣಿ ಪರಿಷ್ಕರಣೆ ನಿರಂತರವಾಗಿರಬೇಕು ಎಂದು ೧೯೮೩ರಲ್ಲಿ ತೀರ್ಪನ್ನು ವಿಧಿಸಿದೆ. ಆದರೀಗ ಕೇಂದ್ರ ಸರ್ಕಾರ ತೀರ್ಪನ್ನು ಧಿಕ್ಕರಿಸಿ ಪಿಂಚಣಿ ಪರಿಷ್ಕರಣೆ ಮಾಡದಿರಲು ನಿರ್ಧರಿಸಿರುವುದು ಖಂಡನೀಯ ಎಂದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಹಿರಿಯಣ್ಣ, ಮುಖಂಡರಾದ ರಾಘವೇಂದ್ರ, ವೆಂಕಟೇಶ್, ಕಾಫಿ ಬೋರ್ಡ್ ನ ವೆಂಕಟೇಶ್, ರಾಜೇಂದ್ರ ಅನ್ವರ್, ಹುಸೇನ್, ಅಬೂಬಕರ್ ಮತ್ತಿತರರಿದ್ದರು.