ವಿರಾಜಪೇಟೆ: ಹಿರಿಯರ ದೂರದೃಷ್ಟಿಯಿಂದ ಕಟ್ಟಿ ಬೆಳೆಸಿದ ಸಹಕಾರಿ ಕ್ಷೇತ್ರ ಇಂದು ಸಕಲ ಸೌವಲತ್ತು ಸೌಲಭ್ಯಗಳೊಂದಿಗೆ ರೈತರಿಗೆ ಉತ್ತಮ ಸಹಕಾರಿಯಾಗಿ ಮುನ್ನಡೆಯುತ್ತಿದೆ. ಸಹಕಾರಿ ಕ್ಷೇತ್ರ ಸರ್ವವ್ಯಾಪಿ ಆಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಭಾಗಿತ್ವ ಹೊಂದಿದೆ ಎಂದು ವಿರಾಜಪೇಟೆ ಶಾಸಕ ಬೋಪಯ್ಯ ಹೇಳಿದರು.
ವಿರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಟ್ಟಣ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ಸಹಕಾರ ಸಂಘಗಳಿಗೆ ತನ್ನದೆ ಅದ ಕೊಡುಗೆ ನೀಡುತ್ತಿದೆ. ಕೇಂದ್ರ ಸರಕಾರ ಸಹ ಒಂದಷ್ಟು ಸಹಭಾಗಿತ್ವವನ್ನು ಸಹಕಾರ ಸಂಘದಲ್ಲಿ ಹೊಂದಿದೆ. ದೇಶದಲ್ಲಿ ಏಕರೂಪ ಕಾನೂನು ಜಾರಿಗೆ ತಂದಿದೆ. ಕನ್ಯಾಕುಮಾರಿಯಿಂದ ಕಾಶ್ಮಿರದವರೆಗೆ ಒಂದೇ ಕಾನೂನು ಜಾರಿಯಲ್ಲಿದೆ. ಸಹಕಾರಿ ಕ್ಷೇತ್ರದಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದ್ದ ಆರಂಭದಲ್ಲಿ ಸ್ವಲ್ಪ ತೊಂದರೆ ಉಂಟಾದರೂ ಇಂದು ಸುಧಾರಿಸಿಕೊಂಡಿದೆ. ಹಿಂದೆ ನಮ್ಮ ಹಿರಿಯರು ಸಹಕಾರ ಸಂಘದಲ್ಲಿ ಆಡಳಿತ ಮಂಡಳಿಯನ್ನು ತಾವೇ ನಿರ್ಧಾರ ಮಾಡುತ್ತಿದ್ದರು. ಆದರೆ ಇಂದು ರಾಜಕೀಯ ಪ್ರವೇಶದಿಂದ ಸಹಕಾರ ಸಂಘಗಳ ಚುನಾವಣೆಯೂ ಪ್ರತಿಷ್ಠೆಯಾಗಿದೆ. ಏನೇ ಅದರೂ ಸಹಕಾರಿ ಕ್ಷೇತ್ರವನ್ನು ನಶಿಸಿ ಹೋಗದಂತೆ ನೋಡಿಕೊಳ್ಳಬೇಕು. ಎಲ್ಲಾರೂ ಕೈಜೋಡಿಸಬೇಕು ಎಂದು ಶಾಸಕ ಬೋಪಯ್ಯ ಹೇಳಿದರು.
ಕೇಂದ್ರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, 117 ವರ್ಷದ ಇತಿಹಾಸ ಕೊಡಗಿನ ಸಹಕಾರಿ ಸಂಘಗಳಿಗಿದೆ. 1921 ರಲ್ಲಿ ರಾಜ್ಯದಲ್ಲಿ ಸಹಕಾರಿ ಸಂಘಗಳ ಉದಯವಾಯಿತು. ಹದಿನೈದು ದಿನದಲ್ಲಿ ಕೊಡಗಿನ ಶಾಂತಳ್ಳಿ ಹೋಬಳಿಯ ತಲ್ತೆರೆ ಶೆಟ್ಟಳ್ಳಿ ಎಂಬ ಕುಗ್ರಾಮದಲ್ಲಿ ಕೊಡಗಿನ ಪ್ರಥಮ ಸಹಕಾರಿ ಸಂಘ ಆರಂಭವಾಯಿತು. ಅದರ ಪ್ರತಿಫಲವಾಗಿ ಜಿಲ್ಲೆಯ 344 ವಿವಿಧ ರೀತಿಯ ಸಹಕಾರ ಸಂಘಗಳು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಲವಾರು ಸಂಘಗಳು ಈಗ ನೂರರ ಸಂಭ್ರಮ ದಾಟಿದೆ ಎಂದು ಹೇಳಿದರು.
ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಕರ್ನಂಡ ರಘು ಸೋಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕ ಹೊಟ್ಟೆಂಗಡ ರಮೇಶ್, ಕೋಲತಂಡ ಸುಬ್ರಮಣಿ, ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕಾಂಡಂಡ ಚರ್ಮಣ, ಕೊಡಗು ಜಿಲ್ಲಾ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಎಂ.ಈ. ಮೋಹನ್ ವಿರಾಜಪೇಟೆ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್, ಪಟ್ಟಣ ಸಹಕಾರ ಬ್ಯಾಂಕ್‌ನ ಸಲಹೆಗಾರ ಚಾರಿಮಂಡ ಪ್ರಕಾಶ್, ವ್ಯವಸ್ಥಾಪಕ ಸಿ.ಕೆ ಪೂವಯ್ಯ, ಆಡಳಿತ ಮಂಡಳಿಯ ನಿರ್ದೇಶರು, ಮತ್ತಿತರರು ಉಪಸ್ಥಿತರಿದ್ದರು.