ಜಿಲ್ಲೆ

ಕೇಂದ್ರದ ವಿರುದ್ಧ ಬೃಹತ್ ಪ್ರತಿಭಟನೆ

ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹುನ್ನಾರ ನಡೆಸಿರುವ ಬಿಜೆಪಿ, ಜೆಡಿಎಸ್ ಹಾಗೂ ಕೇಂದ್ರ ಸರ್ಕಾರ ನಡೆ ವಿರೋಧಿಸಿ ಕರ್ನಾಟಕ ಶೋಷಿತ ಸಮುದಾಯಗಳ ಹಾಗೂ ರಾಜ್ಯ ಹಿಂದುಗಳಿದ ಜಾತಿಗಳ ಒಕ್ಕೂಟದಿಂದ ಇಲ್ಲಿನ ಗಾಂಧಿಭವನದಿಂದ ಡಿಸಿ ಕಚೇರಿಯವರೆಗೆ ಮೆರವರಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ಪ್ರತಿಭಟನೆಯಲ್ಲಿ ಸಂಸದ ಈ.ತುಕಾರಾಮ್, ಶಾಸಕರಾದ ನಾರಾ ಭರತರೆಡ್ಡಿ, ಜೆ.ಎನ್.ಗಣೇಶ, ಪಾಲಿಕೆ ಸದಸ್ಯರಾದ ಎಂ.ಪ್ರಭಂಜನಕುಮಾರ, ಪೇರಂ ವಿವೇಕ, ಮಿಂಚುಶ್ರೀನಿವಾಸಲು ಸೇರಿದಂತೆ ನೂರರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಶಾಸಕ ನಾರಾಭರತರೆಡ್ಡಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ರಾಜಕೀಯ ವಿರೋಧಿಗಳು, ಸಿದ್ಧಾಂತ ವಿರೋಧಿಗಳನ್ನು ತನಿಖಾ ಸಂಸ್ಥೆಗಳ ಮೂಲಕ ಕಾನೂನು ದುಬರ್ಳಕೆ ಮಾಡಿಕೊಳ್ಳುವ ಮೂಲಕ ಅಕ್ರಮವಾಗಿ ಜೈಲಿನಲ್ಲಿ ಇಡುತ್ತಾ ಬಂದಿದೆ. ಅಲ್ಲದೆ, ಮೈಸೂರಿನ ಮುಡಾ ನಿವೇಶನ ಹಂಚಿಕೆಯ ವಿಷಯವನ್ನು ದೊಡ್ಡ ವಿವಾದವನ್ನಾಗಿ ಮಾಡಿ ಅವರನ್ನು ಪದಚ್ಯುತಗೊಳಿಸುವ ಹುನ್ನಾರ ನಡೆದಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಖಾಸಗಿ ವ್ಯಕ್ತಿಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ ದಿನವೇ ತರಾತುರಿಯಲ್ಲಿ ಸರ್ಕಾರದಿಂದ ವರದಿ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು ತಕ್ಷಣ ಸಿದ್ದರಾಮಯ್ಯ ಅವರಿಗೆ ನೀಡಿರುವ ನೋಟಿಸ್‌ನ್ನು ವಾಪಾಸ್ ಪಡೆಯಬೇಕು. ರಾಜ್ಯ ಸರ್ಕಾರದಿಂದ ತನಿಖಾ ಆಯೋಗ ರಚಿಸಲಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಸಹಕರಿಸಬೇಕು. ಇನ್ನು ಬೆಂಗಳೂರಿನಿಂದ ಮೈಸೂರು ಹಮ್ಮಿಕೊಂಡಿರುವ ಪಾದಯಾತ್ರೆನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲ ಶೋಷಿತ ಸಮುದಾಯಗಳು ಎರಡು ಪಕ್ಷದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆ ಗೌರವಾಧ್ಯಕ್ಷರಾದ ಎ.ಮಾನಯ್ಯ, ಮುಂಡ್ರಿಗಿ ನಾಗರಾಜ, ಕಾರ್ಯಾಧ್ಯಕ್ಷ ಶಿವಶಂಕರ, ಅಧ್ಯಕ್ಷ ಗಾದಿಲಿಂಗನಗೌಡ, ಸದಸ್ಯರಾದ ಹುಮಾಯಾನ್ ಖಾನ್, ಚಿದಾನಂದಪ್ಪ ಯಾದವ, ಇಮಾಮ್ ಗೋಡೆಕಾರ, ಸಂಗನಕಲ್ಲು ವಿಜಯಕುಮಾರ, ಎಲ್.ಮಾರೆಣ್ಣ ಇದ್ದರು.