ಕೂಡ್ಲಿಗಿ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮುಚ್ಚಲು ಆದೇಶಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಬಡ ಜನರ ಜೀವನದ ಜತೆ ಚೆಲ್ಲಾಟ ಆಡುತ್ತಿದ್ದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೂರ್ಯಪಾಪಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶುಕ್ರವಾರ ಮಾತನಾಡಿದರು. ಖಾಸಗಿ ಮೆಡಿಕಲ್ ಮಾಫಿಯಾಗೆ ಮಣಿದು ಜನೌಷಧ ಕೇಂದ್ರ ಸ್ಥಗಿತಗೊಳಿಸಿರುವ ಕಾಂಗ್ರೆಸ್ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳ ವಿರುದ್ಧವೂ ದ್ವೇಷ ಸಾಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗರಾಜ ಮಾತನಾಡಿ, ಬಡ ಜನರಿಗೆ ದುಬಾರಿ ಔಷಧಗಳನ್ನು ಕಡಿಮೆ ದರಕ್ಕೆ ನೀಡುತ್ತಿರುವ ಜನೌಷಧ ಕೇಂದ್ರ ಮುಚ್ಚುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡನೀಯ. ಎಷ್ಟೋ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳೇ ಇರಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ನೀಡಿದರೆ ಜನರೇಕೆ ಜನೌಷಧ ಕೇಂದ್ರದಲ್ಲಿ ಔಷಧ ಖರೀದಿಸುತ್ತಾರೆ ಎಂದು ಪ್ರಶ್ನಿಸಿದರು.
ಮಂಡಲ ಕಾರ್ಯದರ್ಶಿ ಪಿ.ಮಂಜುನಾಥ ನಾಯಕ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಎಂ.ಸಚಿನ್ ಕುಮಾರ್, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾಣೇಹಳ್ಳಿ ಹನುಮಂತಪ್ಪ, ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಎಲ್. ಪವಿತ್ರಾ, ಎಸ್ಟಿ ಮೋರ್ಚಾ ಅಧ್ಯಕ್ಷ ಗುರಿಕಾರ ರಾಘವೇಂದ್ರ, ಪ್ರಮುಖರಾದ ಎಸ್.ದುರುಗೇಶ್, ಭರತ್ ರಾಮ, ಮಣಿಕಂಠ, ಪ್ರಕಾಶ ನಾಯ್ಕ, ಸತ್ಯಮೂರ್ತಿ ಇತರರಿದ್ದರು.