ಎನ್.ಆರ್.ಪುರ: ಕೇಂದ್ರ ಸರ್ಕಾರ ಅಡುಗೆ ಅನಿಲ, ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಗದಪ್ರಹಾರ ನಡೆಸುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಟೀಕಿಸಿದರು.
ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್‌ನಿಂದ ಕೇಂದ್ರ ಸರ್ಕಾರದ ವಿರುದ್ಧ ಪಟ್ಟಣದ ಅಂಚೆ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ದೇಶದ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿ ಅದರ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕುವ ಪ್ರಯತ್ನ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಮೇಲೆ 2 ರೂ. ಅಬಕಾರಿ ಶುಲ್ಕ ಹೆಚ್ಚಿಸಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 50 ರೂ.ಗೆ ಹೆಚ್ಚಿಸಿದೆ. ಸಿಎನ್‌ಜಿ ದರವನ್ನೂ ಪ್ರತಿ ಕೆಜಿಗೆ 1 ರೂ. ಹೆಚ್ಚಿಸಿದೆ. ಇದರಿಂದ ಇತರ ವಸ್ತುಗಳ ಬೆಲೆ ಸಹ ಏರಿಕೆಯಾಗಿದೆ. ಈ ಬೆಲೆ ಏರಿಕೆ ಸಾಮಾನ್ಯ ಜನರು, ರೈತರು, ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಭಾರಿ ಹೊರೆಯಾಗಿದೆ ಎಂದು ಆರೋಪಿಸಿದರು.
ಭದ್ರಾ-ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಡಿ, ಸಿಐಐನಂತಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಕೈಗೊಂಬೆಯನ್ನಾಗಿಸಿಕೊಂಡು ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಂಚೆ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಪಪಂ ಅಧ್ಯಕ್ಷೆ ಜುಬೇದಾ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಜಿಪಂ ಮಾಜಿ ಸದಸ್ಯ ಸುಬ್ರಹ್ಮಣ್ಯ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ದಂಡಿನಮಕ್ಕಿ ಶ್ರೀಜಿತ್, ರತನ್‌ಗೌಡ ಅರಗಿ, ಎ.ಪಿ.ಅಭಿಲಾಷ್, ಕೌಶಿಕ ಪಾಟೀಲ್, ಮಹಮ್ಮದ್ ತಾಯಿಬ್, ಮಂಜೇಶ್ ಬೀಳುವ, ಅಕ್ಷಿರಾ, ಬಿಳಾಲುಮನೆ ಉಪೇಂದ್ರ, ಎಸ್.ಡಿ.ರಾಜೇಂದ್ರ, ಇಂದಿರಾನಗರ ರಾಘು, ಅಪೂರ್ವ ಇತರರಿದ್ದರು.